ಬಾಂಗ್ಲಾದೇಶದಲ್ಲಿ ಕ್ಷಿಪ್ರಕ್ರಾಂತಿ – ಹಿಂದೂ ದೇವಸ್ಥಾನಗಳ ಮೇಲೆ ಪುಂಡರ ದಾಳಿ

– ಭಾರತೀಯ ಸಾಂಸ್ಕೃತಿಕ ಕೇಂದ್ರ ಧ್ವಂಸ

ಢಾಕಾ: ಪ್ರಧಾನಿ ಶೇಖ್‌ ಹಸೀನಾ (Sheikh Hasina)ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ ಪುಂಡರು ಬಾಂಗ್ಲಾದೇಶದಲ್ಲಿರುವ (Bangladesh) ಹಿಂದೂ ದೇವಸ್ಥಾನಗಳ (Hindu Temple) ಮೇಲೆ ದಾಳಿ ನಡೆಸಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು (Indian Cultural Centre) ಧ್ವಂಸಗೊಳಿಸಿದ್ದಾರೆ.

ಸೋಮವಾರ ನಡೆದ ಹಿಂಸಾಚಾರದಲ್ಲಿ 4 ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಸಮುದಾಯದ ಮುಖಂಡರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಹಿಂದೂ, ಬೌದ್ಧ, ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ನಾಯಕಿ ಕಾಜೋಲ್ ದೇಬನಾಥ್ ಮಾತನಾಡಿ, ದೇಶಾದ್ಯಂತ ಕನಿಷ್ಠ 4 ಹಿಂದೂ ದೇವಾಲಯಗಳಿಗೆ ಹಾನಿಯಾಗಿದೆ ಎಂಬ ವರದಿಗಳು ಬಂದಿವೆ. ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೆಲವು ಹಿಂದೂ ಸಮಾಜದ ಮುಖಂಡರು ಭಯಭೀತರಾಗಿದ್ದಾರೆ ಎಂದು ಹೇಳಿದರು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಢಾಕಾದ ಧನ್ಮಂಡಿ ಪ್ರದೇಶದಲ್ಲಿರುವ ಇಂದಿರಾಗಾಂಧಿ ಸಾಂಸ್ಕೃತಿಕ ಕೇಂದ್ರವನ್ನು ಪುಂಡರು ಧ್ವಂಸ ಮಾಡಿದ್ದಾರೆ.

ಪ್ರತಿಭಟನಾಕಾರರು ಬಂಗಬಂಧು ಮೆಮೋರಿಯಲ್ ಮ್ಯೂಸಿಯಂ ಸೇರಿದಂತೆ ಢಾಕಾದ ಹಲವಾರು ಪ್ರಮುಖ ಸ್ಥಳಗಳಿಗೆ ಬೆಂಕಿ ಹಚ್ಚಿದ್ದಾರೆ. 1975 ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವಾಗ ಹತ್ಯೆಗೀಡಾದ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಈ ವಸ್ತುಸಂಗ್ರಹಾಲಯವನ್ನು ಸಮರ್ಪಿಸಲಾಗಿದೆ.