ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ; ಪುಣೆಯಲ್ಲಿ 6 ಮಂದಿ ಬಲಿ

ಮುಂಬೈ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಬೈ, ಪುಣೆ ಸೇರಿದಂತೆ ನಗರದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಹಾಮಳೆಗೆ ಪುಣೆಯಲ್ಲಿ 6 ಮಂದಿ ಬಲಿಯಾಗಿದ್ದಾರೆ.

ವಿದ್ಯುತ್‌ ಅವಘಡದಿಂದ ಮೂವರು, ಥಾಣೆಯ ಬಾರ್ವಿ ಅಣೆಕಟ್ಟೆಗೆ ಬಿದ್ದು ಇಬ್ಬರು ಮುಳುಗಿ ಸಾವಿಗೀಡಾಗಿದ್ದಾರೆ. ಭಾರೀ ಮಳೆಯಿಂದಾಗಿ ಮುಂಬೈ ಮತ್ತು ಪಾಲ್ಘರ್‌ಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ವೀಕ್ಷಣಾಲಯವು ಈ ತಿಂಗಳಿನಲ್ಲಿ ಇದುವರೆಗೆ 1,500 ಮಿಮೀ ಮಳೆಯನ್ನು ದಾಖಲಿಸಿದೆ. ನಗರದ ಇತಿಹಾಸದಲ್ಲೇ 2ನೇ ಬಾರಿಗೆ ಅತಿ ಹೆಚ್ಚು ಮಳೆಯಾದಂತಾಗಿದೆ. ಕಳೆದ ಜುಲೈನಲ್ಲಿ ನಗರದಲ್ಲಿ 1,771 ಮಿಮೀ ನಷ್ಟು ಮಳೆಯಾಗಿತ್ತು.

ಕುಂಡಲಿಕಾ ಮತ್ತು ಅಂಬಾ ಸೇರಿದಂತೆ ರಾಜ್ಯದ ನಾಲ್ಕು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ತೀರದಲ್ಲಿ ವಾಸವಾಗಿರುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ನಗರದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋಗಳು ಮತ್ತು ಫೋಟೋಗಳು ಹರಿದಾಡುತ್ತಿವೆ. ಜುಹು ಕಡಲತೀರದ ಉದ್ದಕ್ಕೂ ಅಲೆಗಳ ಅಬ್ಬರ ಜೋರಾಗಿದೆ. ಕರಾವಳಿಯಿಂದ ದೂರವಿರಲು ಜನರಿಗೆ ಎಚ್ಚರಿಸಲಾಗಿದೆ.