ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಸಾಂಗ್ ಗಿಫ್ಟ್

ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್ (, Kiran Raj) ಅವರಿಗೆ ಹುಟ್ಟುಹಬ್ಬದ ಸಂಭ್ರಮ.  ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ರಾನಿ” (Rani) ಚಿತ್ರತಂಡ ಹಾಡೊಂದನ್ನು ಉಡುಗೊರೆ ನೀಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಪ್ರಮೋದ್ ಮರವಂತೆ ಅವರು ಬರೆದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿರುವ ‘ಹವಮಾನವೆ ಸುಂದರ ಸುಂದರ’ ಎಂಬ ಹಾಡು   ಟಿ-ಸೀರೀಸ್‍ನ ಯೂಟ್ಯೂಬ್‍ ಚಾನಲ್‍ನಲ್ಲಿ ಬಿಡುಗಡೆಯಾಗಿದೆ.

ಹುಟ್ಟುಹಬ್ಬ ಹಾಗು ಹಾಡು ಬಿಡುಗಡೆ  ಸಂದರ್ಭದಲ್ಲಿ ಮಾತನಾಡಿದ ಕಿರಣ್‍ ರಾಜ್‍, ‘ಒಂದು ಹಂತದಲ್ಲಿ ನನಗೆ ಜೀವನದಲ್ಲಿ ಮುಂದೇನು ಎಂಬ ಪ್ರಶ್ನೆ ಎದುರಾಯಿತು. ಆಗ ನನಗೆ, “ರಾನಿ” ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಸಿಕ್ಕರು. ನನಗೂ ಈ ಚಿತ್ರದ ಕಥೆ ಇಷ್ಟವಾಯಿತು. ಚಿತ್ರದ ಕಥೆ ಕಾಲ್ಪನಿಕವಾದರೂ, ಪ್ರತಿಯೊಬ್ಬರಿಗೂ ನನ್ನ ಪಾತ್ರ ಹತ್ತಿರವಾಗುತ್ತದೆ‌. ಹೆವಿ ಬಜೆಟ್ ನ ಚಿತ್ರವಿದು. ಕೆಲವರು ನನ್ನ ಸಿನಿಮಾಗೆ ಯಾಕೆ ಇಷ್ಟೊಂದು ಖರ್ಚು ಮಾಡುತ್ತಿದ್ದೀರಾ? ಎಂದು ನಿರ್ಮಾಪಕರನ್ನು ಕೇಳಿರಬಹುದು. ಆದರೆ ನಮ್ಮ ನಿರ್ಮಾಪಕರು ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡುವವರು. ಹಾಗಾಗಿ, ಹಣಕಾಸಿನ ವಿಚಾರಕ್ಕಿಂತ ಒಳ್ಳೆಯ ಸಿನಿಮಾ ಮಾಡಿದ್ದಾರೆ’ ಎಂದರು.

‘ಇದು ಆ್ಯಕ್ಷನ್‍ ಚಿತ್ರವಾದರೂ, ಪಕ್ಕಾ ಕೌಟುಂಬಿಕ ಚಿತ್ರ. ಈ ಹಿಂದೆ ನೀವು ನೋಡಿರದ ಕಿರಣ್ ರಾಜ್ ಅವರನ್ನು “ರಾನಿ” ಚಿತ್ರದಲ್ಲಿ ನೋಡಬಹುದು‌. ಆರು ಆಕ್ಷನ್ ಸನ್ನಿವೇಶಗಳಿದೆ. ಸೆಂಟಿಮೆಂಟ್‍ ಸಹ ಸ್ವಲ್ಪ ಹೆಚ್ಚಾಗಿಯೇ ಇದೆ. ಆರು ಫೈಟ್‍ಗಳಿಗೂ ವಿನೋದ್‍ ಮಾಸ್ಟರ್ ಅವರೆ ಸಾಹಸ ನಿರ್ದೇಶನ ಮಾಡಿದ್ದಾರೆ. ಆರಂಭದಿಂದಲೂ ಸದ್ದು ಮಾಡುತ್ತಿರುವ “ರಾನಿ” ಆಗಸ್ಟ್ 30ಕ್ಕೆ ತೆರೆಗೆ ಬರಲಿದೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ತಿಳಿಸಿದರು.

ಚಿತ್ರತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಬಂದಿದೆ. ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು ನಿರ್ಮಾಪಕರಾದ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗ್ಡೆ. “ಹವಮಾನ” ಹಾಡು ಹುಟ್ಟಿದ ಬಗ್ಗೆ ಪ್ರಮೋದ್ ಮರವಂತೆ ಹೇಳಿದರು‌. ಸಂಗೀತದ ಕುರಿತು ಮಣಿಕಂತ್ ಕದ್ರಿ ವಿವರಿಸಿದರು. ನಟಿಯರಾದ ಸಮೀಕ್ಷಾ, ರಾಧ್ಯ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸ್ಥಿರ ಛಾಯಾಗ್ರಾಹಕರಾಗಿದ್ದ ರಾಘವೇಂದ್ರ ಬಿ ಕೋಲಾರ ಈ ಚಿತ್ರದ ಮೂಲಕ  ಛಾಯಾಗ್ರಾಹಕರಾಗಿದ್ದಾರೆ.