G7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ತಲುಪಿದ ಪ್ರಧಾನಿ ಮೋದಿ

– ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ಮೊದಲ ಪ್ರವಾಸ

ರೋಮ್:‌ G7 ಶೃಂಗಸಭೆಯಲ್ಲಿ (G7- Summit) ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಇಟಲಿಗೆ ತಲುಪಿದ್ದಾರೆ. ಮೋದಿಯವರನ್ನು ಸ್ವಾಗತಿಸಲು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಕೂಡ ಬ್ರಿಂಡಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಇಟಲಿಯ ಬ್ರಿಂಡಿಸಿ ವಿಮಾನ ನಿಲ್ದಾಣ ತಲುಪಿದ ಬಳಿಕ ಎಕ್ಸ್ ಮಾಡಿರುವ ಮೋದಿ (Narendra Modi), ನಾನು G7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿ ತಲುಪಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಅರ್ಥಪೂರ್ಣ ಚರ್ಚೆಗಾಗಿ ವಿಶ್ವ ನಾಯಕರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಜೊತೆಗೆ ಜಾಗತಿಕ ಸವಾಲುಗಳನ್ನು ಪರಿಹರಿಸುವುದು ಮತ್ತು ಉಜ್ವಲ ಭವಿಷ್ಯಕ್ಕಾಗಿ ಅಂತರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವುದು ನಮ್ಮ ಗುರಿ ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಿಯಾಸಿ ಬಸ್‌ ಮೇಲೆ ದಾಳಿ – 50 ಸ್ಥಳೀಯರನ್ನು ವಶಕ್ಕೆ ಪಡೆದ ಪೊಲೀಸರು

ಜಿ7 ಶೃಂಗಸಭೆಯಲ್ಲಿ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸೇರಿದಂತೆ ಹಲವು ವಿಶ್ವ ನಾಯಕರನ್ನು ಭೇಟಿಯಾಗಲಿದ್ದಾರೆ. ಮೂರನೇ ಬಾರಿಗೆ ಭಾರತದ ಪ್ರಧಾನಿಯಾದ ನಂತರ ಪ್ರಧಾನಿ ಮೋದಿಯವರ ಮೊದಲ ವಿದೇಶಿ ಪ್ರವಾಸ ಇದಾಗಿದೆ.

G7 ಯುಎಸ್, ಬ್ರಿಟನ್, ಫ್ರಾನ್ಸ್, ಇಟಲಿ, ಜರ್ಮನಿ, ಕೆನಡಾ ಮತ್ತು ಜಪಾನ್ ಅನ್ನು ಒಳಗೊಂಡಿದೆ. ಪ್ರಸ್ತುತ ಇಟಲಿ G7 (ಗ್ರೂಪ್ ಆಫ್ ಸೆವೆನ್) ಶೃಂಗಸಭೆಯ ಅಧ್ಯಕ್ಷತೆ ಮತ್ತು ಆತಿಥ್ಯ ವಹಿಸುತ್ತಿದೆ.