ಶೀಘ್ರವೇ ಮೊಬೈಲ್ ಸಂಖ್ಯೆ, ಲ್ಯಾಂಡ್‌ಲೈನ್ ಸಂಖ್ಯೆಗೆ ಪಾವತಿಸಬೇಕು ಶುಲ್ಕ!

ನವದೆಹಲಿ: ಶೀಘ್ರದಲ್ಲೇ ನೀವು ನಿಮ್ಮ ಮೊಬೈಲ್ ಸಂಖ್ಯೆ (Mobile No) ಅಥವಾ ನಿಮ್ಮ ಲ್ಯಾಂಡ್‌ಲೈನ್ ಸಂಖ್ಯೆಗೆ (Land Line No) ಶುಲ್ಕವನ್ನು ಪಾವತಿಸಬೇಕಾಗಬಹುದು.

ಹೌದು. ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಈ ಪ್ರಸ್ತಾವನೆ ಕಾರ್ಯರೂಪಕ್ಕೆ ಬಂದರೆ ಟೆಲಿಕಾಂ ಕಂಪನಿಗಳು (Telecom Companies) ಶೀಘ್ರವೇ ಮೊಬೈಲ್‌ ಸಂಖ್ಯೆ ಮತ್ತು ಲ್ಯಾಂಡ್‌ಲೈನ್‌ ಸಂಖ್ಯೆಗೆ ಶುಲ್ಕ ವಿಧಿಸಲಿದೆ.

ಯಾಕೆ ಶುಲ್ಕ?
ಬಹಳಷ್ಟು ಮಂದಿ ಡ್ಯುಯಲ್‌ ಸಿಮ್‌ ಬಳಸುತ್ತಿದ್ದರೂ ಒಂದು ಸಿಮ್‌ ದೀರ್ಘ ಕಾಲದವರೆಗೆ ಬಳಸುವುದಿಲ್ಲ. ಬಳಕೆದಾರರ ಸಂಖ್ಯೆಯನ್ನು ಕಳೆದುಕೊಳ್ಳುವ ಭೀತಿಯಿಂದ ಟೆಲಿಕಾಂ ಕಂಪನಿಗಳು ಆ ಸಂಖ್ಯೆಯನ್ನು ರದ್ದುಗೊಳಿಸುತ್ತಿಲ್ಲ. ಈ ಕಾರಣಕ್ಕೆ ಸರಿಯಾಗಿ ಬಳಕೆಯನ್ನು ಖಾತ್ರಿಪಡಿಸಿಕೊಳ್ಳಲು ಶುಲ್ಕ ವಿಧಿಸಬೇಕು ಎಂಬ ಪ್ರಸ್ತಾಪವನ್ನು ಟ್ರಾಯ್‌ ಮುಂದಿಟ್ಟಿದೆ. ಇದನ್ನೂ ಓದಿ: ನೀಟ್‌ ಯುಜಿ ವಿವಾದ – 1563 ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್‌ ಅಂಕ ರದ್ದು

ಈಗಾಗಲೇ ಆಸ್ಟ್ರೇಲಿಯಾ, ಸಿಂಗಾಪುರ, ಬೆಲ್ಜಿಯಂ, ಯುಕೆ, ಪೋಲೆಂಡ್‌, ಕುವೈತ್‌, ಹಾಂಕಾಂಗ್‌, ಬಲ್ಗೇರಿಯಾ, ದಕ್ಷಿಣ ಆಫ್ರಿಕಾ, ಫಿನ್‌ಲ್ಯಾಂಡ್‌ನಲ್ಲಿ ಟೆಲಿಫೋನ್‌ ನಂಬರ್‌ಗೆ ಶುಲ್ಕ ವಿಧಿಸಲಾಗುತ್ತದೆ. ಕೆಲವೊಂದು ಕಡೆ ಶುಲ್ಕವನ್ನು ಟೆಲಿಕಾಂ ಕಂಪನಿಗಳಿಂದ ಸಂಗ್ರಹಿಸಿದರೆ ಕೆಲವೊಂದು ದೇಶಗಳಲ್ಲಿ ಗ್ರಾಹಕರಿಂದ ಸಂಗ್ರಹಿಸಲಾಗುತ್ತದೆ ಎಂದು ಟ್ರಾಯ್‌ ಹೇಳಿದೆ.

ಹೇಗೆ ಈಗ ಸ್ಪೆಕ್ಟ್ರಂಗಳಿಗೆ ಶುಲ್ಕ ವಿಧಿಸಲಾಗುತ್ತಿದೆಯೋ ಅದೇ ರೀತಿಯಾಗಿ ಮೊಬೈಲ್‌ ಸಂಖ್ಯೆಗಳಿಗೆ ಶುಲ್ಕ ವಿಧಿಸಬೇಕು.  ಶುಲ್ಕವನ್ನು ಒಂದೇ ಬಾರಿ ವಿಧಿಸಬೇಕೇ ಅಥವಾ ವಾರ್ಷಿಕವಾಗಿ ವಿಧಿಸಬೇಕೇ ಎಂಬುದರ ಬಗ್ಗೆ ಸರ್ಕಾರದ ನಿರ್ಧಾರಕ್ಕೆ ಬಿಡಲಾಗಿದೆ ಎಂದು ಟ್ರಾಯ್‌ ತಿಳಿಸಿದೆ.

5G ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಮೊಬೈಲ್‌ ಸಂಖ್ಯೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಿಂದೆ 11 ಅಂಕಿಗಳಿಗೆ ಮೊಬೈಲ್‌ ಸಿಮ್‌ ನೀಡಬೇಕೆಂಬ ಆಗ್ರಹ ಕೇಳಿ ಬಂದಿತ್ತು.

ಟ್ರಾಯ್‌ ಗ್ರಾಹಕ ಹ್ಯಾಂಡ್‌ಬುಕ್ ಪ್ರಕಾರ 90 ದಿನಗಳವರೆಗೆ (ಸುಮಾರು 3 ತಿಂಗಳು) ಬಳಸದಿದ್ದಲ್ಲಿ ಸಿಮ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಬಹುದು. 90 ದಿನಗಳವರೆಗೆ ಒಳಬರುವ ಅಥವಾ ಹೊರಹೋಗುವ ಕರೆಗಳು/ಸಂದೇಶಗಳು, ಡೇಟಾ ಬಳಕೆ, ಮೌಲ್ಯವರ್ಧಿತ ಸೇವೆಗಳ ಬಳಕೆ ಮತ್ತು ಯಾವುದೇ ಸಂಬಂಧಿತ ಪಾವತಿಗಳು ನಡೆಯದೇ ಇದ್ದಲ್ಲಿ ಆ ಸಿಮ್‌ ನಂಬರ್‌ ಅನ್ನು ಕಂಪನಿಗಳು ನಿಷ್ಟ್ರಿಯಗೊಳಿಸುತ್ತವೆ.