ಅಂಗವೈಕಲ್ಯ ಮೆಟ್ಟಿನಿಂತು ಬಾಡಿ ಬಿಲ್ಡರ್ ಆಗಿರೋ ಯುವಕನಿಗೆ ಬೇಕಿದೆ ದಾನಿಗಳ ಸಹಾಯ

ರಾಯಚೂರು: ಜಿಲ್ಲೆಯ ರಾಂಪುರದ ಯುವ ಬಾಡಿ ಬಿಲ್ಡರ್ ಎಂದೇ ಹೆಸರುವಾಸಿಯಾಗಿದ್ದಾರೆ ವೆಂಕಟೇಶ್. 28 ವರ್ಷದ ವೆಂಕಟೇಶ್ ಹುಟ್ಟುತ್ತಲೇ ಅಂಗವೈಕಲ್ಯವನ್ನ ಹೊತ್ತು ಬಂದಿದ್ದರೂ ಎದೆಗುಂದದೇ ತನ್ನದೇ ಆದ ಸಾಧನೆಯ ಹಾದಿಯಲ್ಲಿದ್ದಾರೆ. ಬಾಡಿ ಬಿಲ್ಡಿಂಗ್ ಮೂಲಕ ತನ್ನನ್ನ ತಾನು ಗುರುತಿಸಿಕೊಂಡಿದ್ದಾರೆ.

ರಾಜ್ಯದ ಮೂಲೆಮೂಲೆಯಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದಾರೆ. 9 ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಆದ್ರೆ ಮನೆಯಲ್ಲಿ ಮೊದಲಿನಿಂದಲೂ ಬಡತನವಿದೆ. 9 ಜನರಿರುವ ಕುಟುಂಬಕ್ಕೆ ರಾಯಚೂರು ಕೃಷಿ ವಿವಿಯಲ್ಲಿ ವಾಟರ್‍ಮನ್ ಆಗಿ ದುಡಿಯುತ್ತಿರುವ ವೆಂಕಟೇಶ್ ತಂದೆಯೇ ಆಧಾರಸ್ತಂಭ. ಕಟ್ಟಿಗೆ ಕಡಿದು ಮಾರುವುದು, ಗಣೇಶ ಹಬ್ಬದ ವೇಳೆ ವಿಗ್ರಹ ತಯಾರಿಸುವ ಕೆಲಸಮಾಡಿ ಅಷ್ಟೂ ಇಷ್ಟು ವೆಂಕಟೇಶ್ ಸಂಪಾದಿಸುತ್ತಾರೆ. ಆದ್ರೆ ಅವರ ಈ ಸಂಪಾದನೆ ಸಂಸಾರದ ಬಂಡಿ ಸಾಗಿಸಲು ಸಾಲುತ್ತಿಲ್ಲ.

ಜಿಮ್ ಕೋಚ್ ಲಕ್ಷ್ಮಣ ಯಾದವ್ ಅವರು ವೆಂಕಟೇಶನ ಬಾಡಿಬಿಲ್ಡಿಂಗ್ ಖರ್ಚನ್ನು ಸದ್ಯ ನೋಡಿಕೊಳ್ಳುತ್ತಿದ್ದಾರೆ. ಆದ್ರೆ ವಿವಿಧೆಡೆ ನಡೆಯುವ ಸ್ಪರ್ಧೆಗಳಿಗೆ ಭಾಗವಹಿಸಲು, ಉತ್ತಮ ಆಹಾರ ಸೇವನೆಗೆ ಹಣದ ಕೊರತೆಯಿದೆ. ರಸ್ತೆ ಅಗಲೀಕರಣ ವೇಳೆ ಇದ್ದ ಪುಟ್ಟ ಮನೆಯನ್ನೂ ಕಳೆದುಕೊಂಡಿರುವುದರಿಂದ ಒಂದೇ ಕೋಣೆಯಿರುವ ಬಾಡಿಗೆ ಮನೆಯಲ್ಲಿ ಕುಟುಂಬ ವಾಸವಾಗಿದೆ. ಹೀಗಾಗಿ ಸಾಧನೆ ಮತ್ತು ಆರ್ಥಿಕ ಸ್ವಾವಲಂಬನೆಗೆ ಒಂದು ಕಿರಾಣಿ ಅಂಗಡಿ ತೆರೆಯಲು ಇದೀಗ ಹಣದ ಸಹಾಯಕ್ಕಾಗಿ ವೆಂಕಟೇಶ್ ದಾನಿಗಳಲ್ಲಿ ಅಂಗಲಾಚುತ್ತಿದ್ದಾರೆ.

ಒಟ್ಟಿನಲ್ಲಿ, ಯಾವುದೇ ಕೆಲಸ ಮಾಡಲು ಸಿದ್ದವಿರುವ ವೆಂಕಟೇಶ್, ಬಾಡಿ ಬಿಲ್ಡಿಂಗ್‍ನಲ್ಲೂ ಮುಂದುವರೆದು ಸಾಧನೆ ಮಾಡಬೇಕು ಅಂತ ಮಹಾತ್ವಾಕಾಂಕ್ಷೆ ಇಟ್ಟುಕೊಂಡಿದ್ದಾರೆ. ಅಂಗವೈಕಲ್ಯವನ್ನ ಮೆಟ್ಟಿನಿಂತ ವೆಂಕಟೇಶ್‍ಗೆ ಈಗ ಪ್ರೋತ್ಸಾಹದ ಅಗತ್ಯವಿದೆ.

https://www.youtube.com/watch?v=jNWGdpg2hgI

Comments

Leave a Reply

Your email address will not be published. Required fields are marked *