ಮೆಟ್ರೋ ಹಳದಿ ಮಾರ್ಗದಲ್ಲಿ ವಯಾಡಕ್ಟ್ ಪರಿಶೀಲನಾ ಕಾರ್ಯ ಆರಂಭ

ಬೆಂಗಳೂರು: ನಗರದ ಬಹುನಿರೀಕ್ಷಿತ ಮೆಟ್ರೋ ಲೇನ್ ಗಳಲ್ಲಿ ಒಂದಾದ ನಮ್ಮ ಮೆಟ್ರೋದ ಹಳದಿ ಮಾರ್ಗ ರೀಚ್‌- 5 ರ ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಿವಿಲ್‌ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಈ ಮಾರ್ಗದ ವಯಾಡಕ್ಟ್‌ನಲ್ಲಿ ಪರೀಕ್ಷಾರ್ಥವಾಗಿ ವಿದ್ಯುತ್‌ ಹರಿಸಿ ಪರಿಶೀಲಿಸುವ ಕಾರ್ಯ ಆರಂಭವಾಗಿದೆ. ಈ ಮೂಲಕ ಹಳದಿ ಮಾರ್ಗದಲ್ಲಿ ಕೊನೆಗೂ ಮೆಟ್ರೊ ವಾಣಿಜ್ಯ ಸಂಚಾರ ಆರಂಭಿಸುವ ಕೆಲಸ ಗರಿಗೆದರಿವೆ.

ಸಾಂದರ್ಭಿಕ ಚಿತ್ರ

ಕಳೆದ ಡಿಸೆಂಬರ್‌ನಲ್ಲೇ ಹಳದಿ ಮಾರ್ಗದಲ್ಲಿ (Nmma Metro Yellow Line) ವಾಣಿಜ್ಯ ಸಂಚಾರ ಆರಂಭಿಸುವ ಆಲೋಚನೆಯಲ್ಲಿ BMRCL ಇತ್ತು. ಆದರೆ ಚಾಲಕ ರಹಿತ ಬೋಗಿಗಳ ಪೂರೈಕೆ, ಸಿವಿಲ್‌ ಕಾಮಗಾರಿ ವಿಳಂಬದಿಂದ ಅದು ಸಾಧ್ಯವಾಗಿರಲಿಲ್ಲ. ಅಂದುಕೊಂಡಂತೆ ಎಲ್ಲವೂ ಕಾರ್ಯ ಸಾಧ್ಯವಾದರೆ ಅಕ್ಟೋಬರ್ ಅಥವಾ ನವೆಂಬರ್‌ ಅಂತ್ಯದ ವೇಳೆಗೆ ವಾಣಿಜ್ಯ ಸಂಚಾರ ಆರಂಭಿಸುವ ಸಾಧ್ಯತೆ ಇದೆ.

ಮೊದಲ ಹಂತದಲ್ಲಿ ಬಿಟಿಎಂ ಲೇಔಟ್ ನಿಲ್ದಾಣದ ಪ್ಲಾಟ್‌ಫಾರ್ಮ್‌, ಜಯದೇವ ನಿಲ್ದಾಣ, ರಾಗಿಗುಡ್ಡ ನಿಲ್ದಾಣ, ಆರ್‌.ವಿ.ರಸ್ತೆ ನಿಲ್ದಾಣದ ಬಫರ್‌ ಕೊನೆಯವರೆಗೆ ಹಾದು ಹೋಗಿರುವ 33 ಕೆವಿ ಕೇಬಲ್‌ಗಳು ಹಾಗೂ ವಯಾಡಕ್ಟ್ 750 ವೋಲ್ಟ್‌ ಡಿಸಿ ಥರ್ಡ್‌ ರೈಲು ಭಾಗಗಳಲ್ಲಿ ಪರೀಕ್ಷಾರ್ಥವಾಗಿ ವಿದ್ಯುತ್‌ ಹರಿಸಲಾಗುತ್ತಿದೆ. ಇದಾದ ಮೇಲೆ ಬೊಮ್ಮಸಂದ್ರ, ಹೆಬ್ಬಗೋಡಿ, ಇನ್ಫೊಸಿಸ್‌ ನಿಲ್ದಾಣ, ಎಲೆಕ್ಟ್ರಾನಿಕ್‌ ಸಿಟಿ ಸೇರಿ ಹಳದಿ ಮಾರ್ಗದ ವಯಾಡಕ್ಟ್‌ನಲ್ಲಿ ಪರೀಕ್ಷಾರ್ಥವಾಗಿ ವಿದ್ಯುತ್‌ ಹರಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಇದಕ್ಕೂ ಮೊದಲು ಚಾಲಕ ರಹಿತ ಮೆಟ್ರೊ ರೈಲಿನ ಕೆಲವು ಬೋಗಿಗಳನ್ನು ಜನರೇಟರ್‌ ಸಹಾಯದಿಂದ ಪರೀಕ್ಷಾರ್ಥವಾಗಿ ಓಡಿಸಲಾಗಿತ್ತು. ವಿದ್ಯುದ್ದೀಕರ ಣವಾದ ಮೇಲೆ ಮತ್ತೆ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯಲಿದೆ.