ಜೂನ್‌ 4ರ ಬಳಿಕ ಬಿಜೆಪಿ ನಾಯಕರು ಜೈಲಿಗೆ ಹೋಗಲಿದ್ದಾರೆ: ಅತಿಶಿ

ನವದೆಹಲಿ: ಜೂನ್‌ 4ರ ನಂತರ I.N.D.I.A ಒಕ್ಕೂಟ ಗೆದ್ದು ಸರ್ಕಾರ ರಚಿಸಿದಾಗ ಚುನಾವಣಾ ಬಾಂಡ್ ಕುರಿತು ತನಿಖೆಯನ್ನು ಪ್ರಾರಂಭಿಸಲಾಗುವುದು. ಈ ವೇಳೆ ಬಿಜೆಪಿ ಮಾತ್ರವಲ್ಲ, ಇಡಿ, ಸಿಬಿಐ, ಐಟಿ ಅಧಿಕಾರಿಗಳನ್ನು ಕೂಡ ಜೈಲಿಗೆ ಕಳುಹಿಸಲಾಗುವುದು ಎಂದು ಎಎಪಿ ಸಚಿವೆ ಅತಿಶಿ (Athishi) ಹೇಳಿದ್ದಾರೆ.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗ ನಿಮ್ಮ ಅಂತ್ಯ ಹತ್ತಿರವಾಗಿದೆ ಎಂದು ಬಿಜೆಪಿಗೆ (BJP) ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಈ ದೇಶದ ಜನರು ತಮ್ಮ ಮತಗಳ ಮೂಲಕ ಬಿಜೆಪಿ ಸರ್ಕಾರವನ್ನು ತೊಡೆದುಹಾಕಲು ಮನಸ್ಸು ಮಾಡಿದ್ದಾರೆ. ಬಿಜೆಪಿಯವರು ಈಗ ಎಷ್ಟು ಬೇಕಾದರೂ ಹಗರಣಗಳನ್ನು ಮಾಡಬಹುದು. ಯಾಕೆಂದರೆ ಜೂನ್ 4 ರ ನಂತರ ದೇಶದ ಅತಿದೊಡ್ಡ ಹಗರಣದ ತನಿಖೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಜೂನ್ 4 ರ ನಂತರ ನಮ್ಮ ಸರ್ಕಾರ ರಚನೆಯ ಬಳಿಕ ದೇಶದ ಅತಿದೊಡ್ಡ ಚುನಾವಣಾ ಬಾಂಡ್ ಹಗರಣದ (Electoral Bond) ತನಿಖೆ ನಡೆಯಲಿದೆ. ಬಿಜೆಪಿ ನಾಯಕರು ಮಾತ್ರವಲ್ಲದೆ ಇಡಿ, ಸಿಬಿಐ ಮತ್ತು ಐಟಿ ಅಧಿಕಾರಿಗಳೂ ಜೈಲಿಗೆ ಹೋಗುತ್ತಾರೆ. ಯಾಕೆಂದರೆ ಅವರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅತಿಶಿ ಹೇಳಿದರು. ಇದನ್ನೂ ಓದಿ: ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ವಿಸ್ತರಣೆ

ಇದೇ ವೇಳೆ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ಕುರಿತು ಮಾತನಾಡಿದ ಅತಿಶಿ, ನಾವು ಹೈಕೋರ್ಟ್ ಅನ್ನು ಗೌರವಿಸುತ್ತೇವೆ. ಆದರೆ ನ್ಯಾಯಾಲಯದ ಈ ನಿರ್ಧಾರವನ್ನು ನಾವು ಗೌರವದಿಂದ ಒಪ್ಪುವುದಿಲ್ಲ. ಯಾಕೆಂದರೆ ಈ ಸಂಪೂರ್ಣ ಮದ್ಯದ ಹಗರಣವು ಬಿಜೆಪಿಯ ರಾಜಕೀಯ ಪಿತೂರಿಯಾಗಿದೆ. ಚುನಾವಣಾ ಕಣದಲ್ಲಿ ಎಎಪಿಯನ್ನು ಸೋಲಿಸಲು ಬಿಜೆಪಿಗೆ ಸಾಧ್ಯವಾಗದಿದ್ದಾಗ ಪಿತೂರಿ ಹೊರಹೊಮ್ಮಿತು. ಇದಕ್ಕಾಗಿ ಇಡಿ ಮತ್ತು ಸಿಬಿಐ ಅನ್ನು ಬಳಸಲಾಯಿತು ಎಂದು ಆರೋಪಿಸಿದರು.

ಮಂಗಳವಾರ ಮುಂಜಾನೆ, ಮದ್ಯದ ಹಗರಣ ಪ್ರಕರಣದಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಈ ನಡುವೆ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ವಾರಕ್ಕೊಮ್ಮೆ ಭೇಟಿಯಾಗಲು ಕೋರ್ಟ್ ಅನುಮತಿ ನೀಡಿದೆ.