ನಾಲ್ಕೈದು ವರ್ಷಗಳ ಕಥೆ ತಂದು ಈಗ ದೂರು ಕೊಟ್ರೆ ಏನರ್ಥ? – ಪೆನ್‌ಡ್ರೈವ್‌ ಕೇಸ್‌ ಬಗ್ಗೆ ಹೆಚ್.ಡಿ ರೇವಣ್ಣ ಫಸ್ಟ್ ರಿಯಾಕ್ಷನ್

– ಇಂತಹ ಹಲವು ತನಿಖೆ ನಾವು ಎದುರಿಸಿದ್ದೇವೆ
– ಇದಕ್ಕೆಲ್ಲಾ ಹೆದರಿ ಓಡಿ ಹೋಗಲ್ಲ ಎಂದ ಮಾಜಿ ಸಚಿವ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ತಂದೆ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ವಿರುದ್ಧವೂ ದೌರ್ಜನ್ಯ ಆರೋಪ ಕೇಳಿಬಂದಿದೆ. ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ರೇವಣ್ಣ ಮತ್ತು ಹೆಚ್.ಡಿ ರೇವಣ್ಣ ವಿರುದ್ಧ ದೂರು ದಾಖಲಾಗಿದೆ. ಅದರನ್ವಯ ಎಫ್‌ಐಆರ್‌ನಲ್ಲಿ ಹೆಚ್.ಡಿ.ರೇವಣ್ಣ ಎ1 ಮತ್ತು ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಅವರು, ನಾಲ್ಕೈದು ವರ್ಷದ ಕಥೆ ತಂದು ಈಗ ದೂರು ಕೊಟ್ರೆ ಏನರ್ಥ ಎಂದಿದ್ದಾರೆ. ಇದೆಲ್ಲಾ ಷಡ್ಯಂತ್ರ, ಇದಕ್ಕೆಲ್ಲಾ ಹೆದರಿ ಓಡಿ ಹೋಗಲ್ಲ. ಕಾನೂನು ಹೋರಾಟ ಮಾಡ್ತಿನಿ. ನನ್ನ ವಿರುದ್ಧ ನೀಡಿದ ದೂರಿನ ಬಗ್ಗೆ, ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಸರ್ಕಾರ ಎಸ್‌ಐಟಿಗೆ ವಹಿಸಿದೆಯಲ್ಲಾ, ಎಸ್‌ಐಟಿ ತನಿಖೆ ಮಾಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ – ಸಮಗ್ರ ತನಿಖೆಗೆ ಎಸ್‌ಐಟಿ ರಚನೆ

ಪ್ರಜ್ವಲ್ ರೇವಣ್ಣ ವಿದೇಶ ಪ್ರಯಾಣ ಮೊದಲೇ ನಿರ್ಧಾರವಾಗಿತ್ತು. ಎಫ್‌ಐಆರ್ ಹಾಕ್ತಾರೆ ಅನ್ನೋದು ಗೊತ್ತಿರಲಿಲ್ಲ. ತನಿಖೆಗೆ ಕರೆದರೆ ಅವನೂ ಬರ‍್ತಾನೆ. ದೇವೇಗೌಡರ ಕುಟುಂಬದ ವಿರುದ್ಧ ಷಡ್ಯಂತ್ರ ಹೊಸದಲ್ಲ. ಇಂತಹ ಹಲವು ತನಿಖೆ ನಾವು ಎದುರಿಸಿದ್ದೇವೆ. ದೇವೇಗೌಡರ ಮೇಲೆ ಸಿಒಡಿ ತನಿಖೆ ನಡೆಸಿದ್ದರು, ನಾನು ದೇವೇಗೌಡರ ಬಳಿ ಈ ವಿಷಯ ಮಾತನಾಡಿಲ್ಲ. ಕಾನೂನು ರೀತಿ ಏನಿದೆ ಅದು ನಡೆಯಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಚ್‌.ಡಿ.ರೇವಣ್ಣ ಎ1, ಪ್ರಜ್ವಲ್‌ ರೇವಣ್ಣ ಎ2 ಆರೋಪಿ – ಮನೆ ಕೆಲಸದಾಕೆಯಿಂದ ದೂರು