ಕೊರಿಯರ್ ಗರ್ಲ್ ಆಗಿ ಹೋಗಿ ಪ್ರಚಾರ ಮಾಡಿದ್ದೆ: ಡಿಕೆಶಿ ಪುತ್ರಿ

– ದಯವಿಟ್ಟು ಬಂದು ನಿಮ್ಮ ಜವಾಬ್ದಾರಿಯನ್ನು ಪೂರೈಸಿ

ಬೆಂಗಳೂರು: ನಾನು ನನ್ನ ಚಿಕ್ಕಪ್ಪ ಮಾಡಿರುವ ಕೆಲಸಗಳ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೊರಿಯರ್ ಗರ್ಲ್ ಆಗಿ ಪ್ರಚಾರ ಮಾಡಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ (Aishwarya) ಹೇಳಿದ್ದಾರೆ.

ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಚಿಕ್ಕಪ್ಪನ ಪರವಾಗಿ ಅಪಾರ್ಟ್ ಮೆಂಟ್‍ಗಳಲ್ಲಿ ಮತಪ್ರಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವೊಮದು ಬಾರಿ ನಮ್ಮ ಬ್ಯುಸಿ ಶೆಡ್ಯೂಲ್‍ನಲ್ಲಿ ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ನಾವು ಮರೆತಿರುತ್ತೇವೆ. ಹೀಗಾಗ ಕೊರಿಯರ್ ಗರ್ಲ್ ಆಗಿ ಅವರು ಮಾಡಿರುವ ಕೆಲಸವನ್ನು ಜನಕ್ಕೆ ಹೇಲುವಂತಹ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ನನಗೂ ಹೆಮ್ಮೆ ಇದೆ. ನಮ್ಮ ಸಂಸದನ ಮೇಲೆ ಹಾಗೂ ಅವರು ಮಾಡಿರುವ ಕೆಲಸದ ಮೇಲೆ ಮಗಳಿಗಿಂತ ಹೆಚ್ಚಾಗಿ ಒಬ್ಬಳು ವಿದ್ಯಾವಂತೆ ಆಗಿ, ನನಗೆ ಗೊತ್ತಿರುವುದನ್ನು ಜನಕ್ಕೆ ಹೇಳುವುದು ನನ್ನ ಕರ್ತವ್ಯ ಅಂದುಕೊಂಡು ಹೋಗಿ ಪ್ರಚಾರ ಮಾಡಿದ್ದೇನೆ. ಈ ಪ್ರಚಾರಕ್ಕೆ ತಕ್ಕ ಪ್ರತಿಫಲ ಸಿಗುತ್ತೆ ಅನ್ನುವ ವಿಶ್ವಾಸವಿದೆ. ಅಲ್ಲದೇ ಚಿಕ್ಕಪ್ಪ ಗೆದ್ದೇ ಗೆಲ್ತಾರೆ ಎಂಬ ಆತ್ಮವಿಶ್ವಾಸ ಕುಟುಂಬಕ್ಕಿದೆ ಎಂದರು.

ಮತದಾನ ಮಾಡುವುದು ಹಕ್ಕು ಮಾತ್ರವಲ್ಲ ನಮ್ಮ ಜವಾಬ್ದಾರಿ ಕೂಡ ಆಗಿದೆ. ಹೀಗಾಗಿ ದಯವಿಟ್ಟು ಬಂದು ನಿಮ್ಮ ಜವಾಬ್ದಾರಿಯನ್ನು ಪೂರೈಸಿ. ಯಾಕೆಂದರೆ ಇವತ್ತು ನೀವು ಜವಾಬ್ದಾರಿಯಿಂದ ಮತ ಹಾಕಿದ್ರೆ ಮಾತ್ರ ನಾಳೆ ನಿಮಗೆ ಹಕ್ಕು ಸಿಗುವುದು. ಮುಂದೆ ಏನದ್ರೂ ತೊಂದರೆ ಆದ್ರೆ ನಿಮಗೆ ಪ್ರಶ್ನೆ ಮಾಡುವ ಹಕ್ಕಿದೆ. ದಯವಿಟ್ಟು ಬಂದು ನಿಮ್ಮ ಮತ ಚಲಾಯಿಸಿ. ನಿಮಗೆ ಯಾರು ಸರಿ ಅನಿಸ್ತಾರೋ ಅವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಎಂದರು.