ಸುರೇಶ್‌ಗೆ ವೋಟ್ ಹಾಕಿಲ್ಲ ಅಂದ್ರೆ ಹಕ್ಕು ಪತ್ರ ನೀಡಲ್ಲ: ಡಿಕೆಶಿಯಿಂದ ಬೆದರಿಕೆ, ಬಿಜೆಪಿ ಕಿಡಿ

– ಬಿಜೆಪಿಯಿಂದ ಬೆದರಿಕೆ ವಿಡಿಯೋ ಬಿಡುಗಡೆ

ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election) ಸಮಯದಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ (Bengaluru Rural) ಡಿಕೆ ಬ್ರದರ್ಸ್ ಗೂಂಡಾಗಿರಿ, ಬೆದರಿಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ (BJP) ಪದೇ ಪದೇ ಆರೋಪ ಮಾಡುತ್ತಿದೆ.

ಅಪಾರ್ಟ್‌ಮೆಂಟ್‌ ನಿವಾಸಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಸಭೆ ನಡೆಸಿ, ಡಿಕೆ ಸುರೇಶ್‌ಗೆ ವೋಟ್ ಹಾಕಿಲ್ಲ ಅಂದ್ರೆ ನಿಮಗೆ ನೀರು ಕೊಡಲ್ಲ ಎಂದು ನೇರವಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ.  ಇದನ್ನೂ ಓದಿ: ಫಸ್ಟ್‌ ಟೈಂ ಅತಿ ಕಡಿಮೆ ಸಂಖ್ಯೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ

ಪೋಸ್ಟ್‌ನಲ್ಲಿ ಏನಿದೆ?
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊತ್ವಾಲ್ ಬ್ರದರ್ಸ್‌ಗಳ ಗೂಂಡಾಗಿರಿ ದಿನೇ ದಿನೇ ಹೆಚ್ಚಾಗುತ್ತಿದೆ. ನಿನ್ನೆ ರೈತನ ಹೊಲ ಸುಟ್ಟು, ರೈತನಿಗೆ ಗನ್ ಪಾಯಿಂಟ್ ಇಟ್ಟು ವಾತಾವರಣವನ್ನು ಭಯಭೀತಗೊಳಿಸಿದ್ದರು. ಇಂದು ಅಪಾರ್ಟ್ಮೆಂಟ್ ನಿವಾಸಿಗಳ ಸಭೆ ನಡೆಸಿ ನೀವು ಡಿಕೆ ಸುರೇಶ್‌ ಅವರಿಗೆ ವೋಟು ಹಾಕಿಲ್ಲವೆಂದರೆ ನಿಮಗೆ ನೀರು ಕೊಡುವುದಿಲ್ಲ, ಹಕ್ಕು ಪತ್ರ ನೀಡುವುದಿಲ್ಲ ಎಂದು ನೇರವಾಗಿಯೇ ಡಿಕೆ ಶಿವಕುಮಾರ್‌ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ನಿಮ್ಮ ಈ ಗೊಡ್ಡು ಬೆದರಿಕೆಗಳಿಗೆ ಜನತೆ ಏಪ್ರಿಲ್ 26 ರಂದು ಅಂತಿಮ ಮೊಳೆ ಹೊಡೆಯುವುದು ಖಚಿತ ನಿಶ್ಚಿತ ಖಂಡಿತ ಎಂದಿದೆ. ಇದನ್ನೂ ಓದಿ: ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಟ್ವೀಟ್ ಮೂಲಕ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ಇದೇ ವೇಳೆ, ಕುಣಿಗಲ್ ರೈತ ಪ್ರೇಮ್ ಕುಮಾರ್ ತೋಟವನ್ನು ಕಾಂಗ್ರೆಸ್ಸಿಗರು ಸುಟ್ಟು ಹಾಕಿದ್ದಾರೆ. ಅಲ್ಲದೇ, ಪ್ರೇಮ್‌ಕುಮಾರ್‌ಗೆ ಬೆದರಿಕೆ ಹಾಕಿ ತಮಗೆ ಬೇಕಾದಂತೆ ಕೋತ್ವಲ್ ಬ್ರದರ್ಸ್ ಹೇಳಿಕೆ ಕೊಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.