ಛತ್ತೀಸ್‌ಗಢದಲ್ಲಿ ಬಸ್‌ ಕಂದಕಕ್ಕೆ ಉರುಳಿ 12 ಮಂದಿ ದುರ್ಮರಣ

ರಾಯ್ಪುರ: ದುರ್ಗ್ ಜಿಲ್ಲೆಯ ಕುಮ್ಹಾರಿ ಪ್ರದೇಶದಲ್ಲಿ ಬಸ್ ಪಲ್ಟಿಯಾಗಿ ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 12 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 14 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ 8:30 ಕ್ಕೆ ಈ ಘಟನೆ ನಡೆದಿದ್ದು, ದುರ್ಗದಲ್ಲಿ ಕಾರ್ಮಿಕರೊಂದಿಗೆ ತುಂಬಿದ್ದ ಬಸ್ ಹಳ್ಳಕ್ಕೆ ಬಿದ್ದಿದ್ದರಿಂದ 12 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 14 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ದುರ್ಗದ ಜಿಲ್ಲಾಧಿಕಾರಿ ರಿಚಾ ಪ್ರಕಾಶ್ ಚೌಧರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಳೆದ 20 ವರ್ಷಗಳಲ್ಲಿ ನಡೆದ ಭೀಕರ ಸೇತುವೆ ಕುಸಿತಗಳು-ಎಲ್ಲೆಲ್ಲಿ?

ಗಾಯಗೊಂಡವರಲ್ಲಿ ಹನ್ನೆರಡು ಜನರನ್ನು ಎಐಐಎಂಎಸ್ (ರಾಯಪುರ)ಗೆ ಕಳುಹಿಸಲಾಗಿದೆ. ಉಳಿದ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ. ನಾವು ಅವರಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಬಸ್ಸಿನೊಳಗೆ ಇನ್ನೂ ಸಿಲುಕಿರುವ ಪ್ರಯಾಣಿಕರನ್ನು ಹೊರತೆಗೆಯುವ ಪ್ರಕ್ರಿಯೆ ನಡೆಯುತ್ತಿದೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಪಘಾತದ ಕುರಿತು ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಹಾಕಿ, ಖಾಸಗಿ ಸಂಸ್ಥೆಯೊಂದರ ಉದ್ಯೋಗಿಗಳು ಪ್ರಯಾಣಿಸುತ್ತಿದ್ದ ಬಸ್ ದುರ್ಗ್‌ನ ಕುಮ್ಹಾರಿ ಬಳಿ ಅಪಘಾತ ಒಳಗಾಗಿರುವ ಸುದ್ದಿ ಕೇಳಿ ದುಃಖಿತನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಲೋಕಸಭಾ ಅಭ್ಯರ್ಥಿ ನಿಧನ- ಚುನಾವಣೆ ಮುಂದೂಡಿಕೆ

ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ತಮ್ಮವರ ಅಗಲಿಕೆ ನೋವು ಭರವಿಸುವ ಶಕ್ತಿ ಕುಟುಂಬಸ್ಥರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಗಾಯಗೊಂಡಿರುವವರಿಗೆ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.