ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಇಂದೇ ಅಂತಿಮ? – ಯದುವೀರ್ ವಿರುದ್ಧ ಯಾರು ಕಣಕ್ಕೆ?

ಮೈಸೂರು: ಲೋಕಸಭಾ ಚುನಾವಣೆಗೆ ಮೈಸೂರು (Mysuru Lok Sabha) ಕಾಂಗ್ರೆಸ್ (Congress) ಇಂದು ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಮೈಸೂರಿನಲ್ಲೇ ವಾಸ್ತವ್ಯ ಹೂಡಿರುವ ಸಿದ್ದರಾಮಯ್ಯ, ತಮ್ಮ ನಿವಾಸದಲ್ಲಿ ಮುಖಂಡರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ (BJP) ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಅವರನ್ನು ಹುರಿಯಾಳಾಗಿ ಬಿಜೆಪಿ ಅಖೈರುಗೊಳಿಸಿದೆ. ಬಿಜೆಪಿ ಅಭ್ಯರ್ಥಿ ಘೋಷಿಸಿದಂತೆಯೇ ಈ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಬದಲಾಗಿದೆ. ಇದನ್ನೂ ಓದಿ: ರಾಜಕೀಯಕ್ಕೆ ಬಂದಾಗ ಜಾಸ್ತಿ ಟೀಕೆ ಎದುರಿಸಬೇಕು: ಯದುವೀರ್ ಒಡೆಯರ್

ಈಗ ಯದುವೀರ್‌ಗೆ ಠಕ್ಕರ್ ಕೊಡುವಂತಹ ಅಭ್ಯರ್ಥಿಯನ್ನು ಕಾಂಗ್ರೆಸ್ ಆಯ್ಕೆ ಮಾಡಬೇಕಾಗಿದೆ. ಈ ಕಾರಣದಿಂದ ಅಭ್ಯರ್ಥಿ ಆಯ್ಕೆಯೇ ಬಹುದೊಡ್ಡ ಸವಾಲು. ಒಂದೆಡೆ ಬಿಜೆಪಿ ಮುಖಂಡನಿಗೆ ಗಾಳ ಹಾಕಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಕ್ಷೇತ್ರಕ್ಕೆ ಮಾಜಿ ಶಾಸಕ ದಿ. ವಾಸು ಪುತ್ರ ಕವೀಶ್ ಕರೆತರಲು ಪ್ರಯತ್ನ ನಡೆದಿದೆ ಎನ್ನಲಾಗಿದೆ.

ಇದಕ್ಕೂ ಮೊದಲು ಜಿ.ಟಿ.ದೇವೇಗೌಡ ಅವರನ್ನು ಸೆಳೆಯಲು ಕಾಂಗ್ರೆಸ್‌ನಿಂದ ಪ್ರಯತ್ನ ನಡೆದಿತ್ತು. ಆದರೆ ಜಿ.ಟಿ.ದೇವೇಗೌಡರು ಒಪ್ಪದ ಕಾರಣ ಕವೀಶ್ ಅವರನ್ನು ಕಣಕ್ಕಿಳಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಕಾಂಗ್ರೆಸ್ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನನ್ನ ವಿರುದ್ಧವೂ ಯಶಸ್ವಿಯಾಗಿಲ್ಲ, ಅವರಿಂದಲೂ ಟಿಕೆಟ್ ತಗೊಂಡು ಬರೋದಕ್ಕೆ ಆಗಿಲ್ಲ: ಕರಂದ್ಲಾಜೆ

ಇತ್ತ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ಟಿಕೆಟ್ ಯಾರಿಗೆ ಕೊಡಬೇಕು ಎಂಬ ಪ್ರಶ್ನೆಯಿದೆ. ಲೋಕಸಭೆಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅಳಿಯ ಡಾ. ಮೋಹನ್, ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯರನ್ನ (Siddaramaiah) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಡಾಕ್ಟರ್ ಮೋಹನ್‌ಗೆ ಬಿಜೆಪಿಯ ಮಾಜಿ ಸಚಿವ ಕೋಟೆ ಶಿವಣ್ಣ ಸಾಥ್ ನೀಡಿದ್ದಾರೆ. ಶಾಸಕ ಅನಿಲ್ ಚಿಕ್ಕಮಾದು ಜೊತೆಯಲ್ಲಿ ತೆರಳಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ಡಾಕ್ಟರ್ ಮೋಹನ್ ತೆರಳಿದ್ದಾರೆ.