ಮಾ.7 ರಿಂದ ಇಂಗ್ಲೆಂಡ್‌ ವಿರುದ್ಧ ಫೈನಲ್‌ ಟೆಸ್ಟ್‌ – ಹಲವು ದಾಖಲೆ ನಿರ್ಮಿಸಲು ಭಾರತ ವೇಯ್ಟಿಂಗ್‌

ಧರ್ಮಶಾಲಾ: ಇದೇ ಮಾರ್ಚ್‌ 7 ರಿಂದ ಭಾರತ ಮತ್ತು ಇಂಗ್ಲೆಂಡ್‌ (England) ನಡುವೆ ಅಂತಿಮ ಹಾಗೂ 5ನೇ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಮಾರ್ಚ್‌ 7 ರಿಂದ 11ರ ವರೆಗೆ ಪಂದ್ಯ ನಡೆಯಲಿದ್ದು, ಹಲವು ಐತಿಹಾಸಿಕ ದಾಖಲೆಗಳನ್ನು ಸೃಷ್ಟಿಸಲು ಟೀಂ ಇಂಡಿಯಾ (Team India) ಕಾತರವಾಗಿದೆ.

ಹಿಮಾಚಲ ಪ್ರದೇಶದಲ್ಲಿರುವ ಧರ್ಮಶಾಲಾ ಕ್ರೀಡಾಂಗಣದಲ್ಲಿ ಗುರುವಾರ ಬೆಳಗ್ಗೆ 9:30 ರಿಂದ ಪಂದ್ಯ ಆರಂಭವಾಗಲಿದೆ. ಈ ಪಂದ್ಯವನ್ನಾಡುವ ಮೂಲಕ ಟೀಂ ಇಂಡಿಯಾದ ಸ್ಪಿನ್‌ ಮಾಂತ್ರಿಕ ಆರ್‌.ಅಶ್ವಿನ್‌ (R Ashwin) 100ನೇ ಟೆಸ್ಟ್‌ ಪಂದ್ಯವನ್ನಾಡಿದ 14ನೇ ಭಾರತೀಯ ಆಟಗಾರನೆಂಬ ಸಾಧನೆ ಮಾಡಲಿದ್ದಾರೆ. ಜೊತೆಗೆ ಟೀಂ ಇಂಡಿಯಾ ನಾಯಕ ಸಿಕ್ಸರ್‌ಗಳಿಂದಲೇ WTC ನಲ್ಲಿ ವಿಶೇಷ ದಾಖಲೆ ಬರೆಯಲ್ಲಿದ್ದಾರೆ. ಯುವ ಆರಂಭಿಕ ಯಶಸ್ವಿ ಜೈಸ್ವಾಲ್‌ (Yashasvi Jaiswal) ಸಹ ಸರಣಿಯೊಂದರಲ್ಲಿ 600ಕ್ಕೂ ಹೆಚ್ಚು ರನ್‌ಗಳಿಸಿದ ವಿರಾಟ್‌ ಕೊಹ್ಲಿ ಅವರ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ (Test Series) ಈಗಾಗಲೇ 4-1 ಅಂತರದಲ್ಲಿ ಸರಣಿ ಗೆದ್ದಿರುವ ಭಾರತ, ಅಂತಿಮ ಟೆಸ್ಟ್‌ನಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಲು ಕಾಯುತ್ತಿದೆ. ಇದನ್ನೂ ಓದಿ: ಮೆಗ್‌ ಲ್ಯಾನಿಂಗ್‌, ರಾಡ್ರಿಗಾಸ್‌ ಫಿಫ್ಟಿ; ಮುಂಬೈ ವಿರುದ್ಧ ಡೆಲ್ಲಿಗೆ 29 ರನ್‌ಗಳ ಗೆಲುವು

ಒಂದೇ ಒಂದು ಸಿಕ್ಸರ್‌ ಸಿಡಿಸಿದ್ರೆ ದಾಖಲೆ:
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಸರ್‌ಗಳ ಸರದಾರನೆಂದೇ ಬಿಂಬಿಸಿಕೊಂಡಿರುವ ಹಿಟ್‌ಮ್ಯಾನ್ ರೋಹಿತ್ ಶರ್ಮಾ, ಮೊದಲ ಸಿಕ್ಸರ್ ಸಿಡಿಸುತ್ತಿದ್ದಂತೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ (WTC) ಟೂರ್ನಿಯಲ್ಲಿ 50 ಸಿಕ್ಸರ್ ದಾಖಲೆ ನಿರ್ಮಿಸಲಿದ್ದಾರೆ. ಡಬ್ಲ್ಯೂಟಿಸಿ ಟೂರ್ನಿಯ 31 ಪಂದ್ಯಗಳಿಂದ 49 ಸಿಕ್ಸ್ ಸಿಡಿಸಿರುವ ರೋಹಿತ್‌, ಇನ್ನೊಂದು ಸಿಕ್ಸರ್‌ ಬಾರಿಸಿದ್ರೆ, 50ನೇ ಸಿಕ್ಸರ್ ಬಾರಿಸಿದ ವಿಶ್ವದ 2ನೇ ಹಾಗೂ ಭಾರತದ ಮೊದಲ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ. WTCನಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ 44 ಪಂದ್ಯಗಳಿಂದ 78 ಸಿಕ್ಸರ್‌ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 38 ಸಿಕ್ಸರ್‌, ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ 27 ಸಿಕ್ಸರ್‌, ಭಾರತದ ಯಶಸ್ವಿ ಜೈಸ್ವಾಲ್ 26 ಸಿಕ್ಸರ್‌ ಸಿಡಿಸಿ ಕ್ರಮವಾಗಿ ಮೊದಲ 5 ಸ್ಥಾನಗಳಲ್ಲಿದ್ದಾರೆ.

600 ಸಿಕ್ಸರ್‌ಗಳ ಸನಿಹದಲ್ಲಿ ಹಿಟ್‌ಮ್ಯಾನ್
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಮಾದರಿಗಳಲ್ಲಿಯೂ 594 ಸಿಕ್ಸರ್ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ 6 ಸಿಕ್ಸರ್ ಸಿಡಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಇದನ್ನೂ ಓದಿ: ಫ್ರೀ.. ಫ್ರೀ.. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಡಿಸ್ನಿ+ ಹಾಟ್‍ಸ್ಟಾರ್‌ನಲ್ಲಿ ಫ್ರೀ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್ಸ್
* 594- ರೋಹಿತ್ ಶರ್ಮಾ- ಭಾರತ- 471 ಪಂದ್ಯ
* 553- ಕ್ರಿಸ್ ಗೇಲ್- ವೆಸ್ಟ್ ಇಂಡೀಸ್-483 ಪಂದ್ಯ
* 476- ಶಾಹೀದ್ ಅಫ್ರಿದಿ- ಪಾಕಿಸ್ತಾನ- 524 ಪಂದ್ಯ
* 398 – ಬ್ರೆಂಡನ್ ಮೆಕಲಮ್- ನ್ಯೂಜಿಲೆಂಡ್-432 ಪಂದ್ಯ
* 383- ಮಾರ್ಟಿನ್ ಗಪ್ಟಿಲ್- ನ್ಯೂಜಿಲೆಂಡ್-367 ಪಂದ್ಯ