ಮೋದಿ ಕುಟುಂಬದ ಬಗ್ಗೆ ಹೇಳಿಕೆ ನೀಡಿರುವ ಲಾಲು ವಿರುದ್ಧ ಬಿಜೆಪಿ ವಾಗ್ದಾಳಿ

– ʼಮೋದಿ ಕಾ ಪರಿವಾರ್ʼ ಎಂದ ಬಿಜೆಪಿ ದಿಗ್ಗಜರು

ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಇಂದು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ “ಮೋದಿ ಕಾ ಪರಿವಾರ್” ಅನ್ನು ಸೇರಿಸಿದ್ದಾರೆ.

ಪಾಟ್ನಾದಲ್ಲಿ ನಡೆದಿದ್ದ ಸಮಾವೇಶದಲ್ಲಿ ಮೋದಿ (Narendra Modi) ಕುಟುಂಬದ ಬಗ್ಗೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ನಮ್ಮದು ಕುಟುಂಬ ರಾಜಕಾರಣ ಅಂತ ಮೋದಿ ಹೇಳುತ್ತಾರೆ. ಮೋದಿಗೆ ಸ್ವಂತ ಕುಟುಂಬ ಇಲ್ಲದಿದ್ದರೆ ನಾವೇನು ಮಾಡೋಕೆ ಸಾಧ್ಯ?, ಅವರಿಗೇಕೆ ಮಕ್ಕಳಿಲ್ಲ?. ರಾಮಮಂದಿರದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಅವರು ನಿಜವಾದ ಹಿಂದೂ ಕೂಡ ಅಲ್ಲಾ. ಹಿಂದೂ ಸಂಪ್ರದಾಯದಲ್ಲಿ ತಂದೆ-ತಾಯಿ ಸತ್ತರೆ ತಲೆ ಕೂದಲು ಬೋಳಿಸಬೇಕು. ಆದರೆ ತಾಯಿ ಮೃತಪಟ್ಟಾಗ ಮೋದಿ ಆ ರೀತಿ ಮಾಡಲಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಯಾರ ಅನುಮತಿ ಪಡೆದು ಪರೀಕ್ಷೆ ಮಾಡಿದ್ದಾರೆ- ಖಾಸಗಿ ಎಫ್‌ಎಸ್‌ಎಲ್‌ ವರದಿಗೆ ಪರಮೇಶ್ವರ್‌ ಗರಂ

ಸದ್ಯ ಲಾಲು ಹೇಳಿಕೆಗೆ ಬಿಜೆಪಿ ತಿರುಗೇಟು ನೀಡುತ್ತಿದ್ದು, ಅಮಿತ್‌ ಶಾ, ನಡ್ಡಾ, ಪುಷ್ಕರ್ ಸಿಂಗ್ ಧಾಮಿ, ಮನ್ಸುಕ್ ಮಾಂಡವೀಯ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ತಮ್ಮ ಹೆಸರ ಮುಂದೆ ʼಮೋದಿ ಪರಿವಾರ್ʼ ಎಂದು ಬರೆದುಕೊಂಡಿದ್ದಾರೆ. ಮೋದಿ ಕಾ ಪರಿವಾರ್ ಅಭಿಯಾನವು 2019 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ “ಮೈನ್ ಭಿ ಚೌಕಿದಾರ್” (ನಾನೂ ಸಹ ಕಾವಲುಗಾರ) ಚಾಲನೆಯ ರೀತಿಯಲ್ಲಿದೆ.

ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರು ಲಾಲು ಹೇಳಿಕೆಯನ್ನು ಆಕ್ಷೇಪಾರ್ಹ ಮತ್ತು ಅಗೌರವ ಎಂದು ಬಣ್ಣಿಸಿದ್ದಾರೆ. ನಮ್ಮ ಪ್ರಧಾನಿ ವಿರುದ್ಧ ಲಾಲು ಪ್ರಸಾದ್ ಬಳಸಿರುವ ಭಾಷೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಆರ್‌ಜೆಡಿ ಸನಾತನ ಧರ್ಮದ ವಿರುದ್ಧ ಮತ್ತು ಶತಮಾನಗಳ ಹಳೆಯ ಸಂಪ್ರದಾಯವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.