ವಾರಂತ್ಯಕ್ಕೆ ಭರ್ಜರಿ ಕಲೆಕ್ಷನ್ ಮಾಡಿದ ‘ಆರ್ಟಿಕಲ್ 370’ ಸಿನಿಮಾ

ಯಾಮಿನಿ ಗೌತಮ್ ಮುಖ್ಯಭೂಮಿಕೆಯ ಆರ್ಟಿಕಲ್ 370 ಭರ್ಜರಿ ಕಲೆಕ್ಷನ್ ಮಾಡಿದೆ. ವಾರಂತ್ಯಕ್ಕೆ ಈ ಸಿನಿಮಾ 34.71 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಸ್ವತಃ ಚಿತ್ರತಂಡವೇ ಘೋಷಣೆ ಮಾಡಿದೆ. ಅಲ್ಲಿಗೆ ದಿನದಿಂದ ದಿನಕ್ಕೆ ಬಾಕ್ಸ್ ಆಫೀಸ್ (Box Office) ಗಳಿಕೆ ಏರುತ್ತಲೇ ಇದೆ.

ಒಂದು ಕಡೆ ಜಗತ್ತಿನಾದ್ಯಂತ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೆ ಮತ್ತೊಂದು ಕಡೆ  ಲ್ಫ್ ರಾಷ್ಟ್ರಗಳಲ್ಲಿ (Gulf nation) ಮತ್ತೊಂದು ಭಾರತದ ಸಿನಿಮಾವನ್ನು ಬ್ಯಾನ್ (Ban) ಮಾಡಲಾಗಿದೆ. ಈ ಹಿಂದೆ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ನಟನೆಯ ಫೈಟರ್ ಸಿನಿಮಾವನ್ನೂ ಬ್ಯಾನ್ ಮಾಡಲಾಗಿತ್ತು. ಈಗ ಆರ್ಟಿಕಲ್ 370 ಸಿನಿಮಾವನ್ನು ಬಿಡುಗಡೆ ಮಾಡದಂತೆ ಗಲ್ಫ್ ರಾಷ್ಟ್ರಗಳು ಮುಂದಾಗಿವೆ. ಹಾಗಾಗಿ ಗಲ್ಫ್ ರಾಷ್ಟ್ರಗಳಲ್ಲಿ ಈ ಸಿನಿಮಾ ರಿಲೀಸ್ ಆಗಿಲ್ಲ.

ಇದೇ ಶುಕ್ರವಾರ ಆರ್ಟಿಕಲ್ 370 (Article 370) ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇವಲ ನೋಡುಗರು ಮಾತ್ರವಲ್ಲ, ವಿಮರ್ಶಕರೂ ಕೂಡ ಸಿನಿಮಾದ ಬಗ್ಗೆ ಹೊಗಳಿ ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಚಿತ್ರವನ್ನು ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಬಾಕ್ಸ್ ಆಫೀಸ್ ಲೆಕ್ಕಾಚಾರ ಕೂಡ ಸಕಾರಾತ್ಮಕವಾಗಿಯೇ ಕೇಳಿ ಬರುತ್ತಿದೆ.

ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟಿಕಲ್ 370 ಚಿತ್ರದ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದರು. ಕಾಶ್ಮೀರದಲ್ಲಿ ನಡೆದ ಕಾರ್ಯಮಕ್ರದಲ್ಲಿ ಮೋದಿ, ‘ಆರ್ಟಿಕಲ್ 370 ಸಿನಿಮಾ ಜಮ್ಮು ಕಾಶ್ಮೀರದ ವಿಶೇಷ ಅಧಿಕಾರವನ್ನು ಯಾಕೆ ತೆಗೆಯಲಾಯಿತು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದ್ದರು.

 

ಮೋದಿಯ ಈ ಭಾಷಣವನ್ನು ಕೇಳಿರುವ ಆರ್ಟಿಕಲ್ 370 ಸಿನಿಮಾದ ನಾಯಕಿ ಯಾಮಿನಿ ಗೌತಮ್ (Yamini Gautam), ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಈ ನೈಜ ಕಥೆಯನ್ನು ನಿಮಗೆ ಮತ್ತು ಎಲ್ಲರಿಗೂ ಒಪ್ಪುವಂತೆ ಸಿನಿಮಾ ಮಾಡಿದ್ದೇವೆ ಎನ್ನುವ ಭರವಸೆಯನ್ನು ನಾನು ಮತ್ತು ನನ್ನ ತಂಡ ನೀಡಲಿದೆ ಎಂದು ಯಾಮಿನಿ ಪ್ರತಿಕ್ರಿಯೆ ನೀಡಿದ್ದರು.