ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ರಾಮನಗರದಲ್ಲಿ ಅಹೋರಾತ್ರಿ ಡಿಸಿ ಕಚೇರಿ ಮುಂದೆ ವಕೀಲರ ಪ್ರತಿಭಟನೆ

– ಡಿಸಿ ಕಚೇರಿಗೆ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ
–  ಡಿಸಿ, ಎಸ್‌ಪಿ ಸೇರಿ ಅಧಿಕಾರಿಗಳಿಗೆ ರಾಜಕೀಯ ಒತ್ತಡ ಇದೆ

ರಾಮನಗರ: ಪೋಲಿಸರು (Police) ಮತ್ತು ವಕೀಲರ (Lawyers) ನಡುವಿನ ಸಂಘರ್ಷ ಮುಗಿಲುಮುಟ್ಟಿದೆ. 40 ವಕೀಲರ ಮೇಲೆ ಎಫ್‌ಐಆರ್ (FIR) ಖಂಡಿಸಿ ಕಳೆದೊಂದು ವಾರದಿಂದ ವಕೀಲರ ಸಂಘ ಮಾಡುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.

ಐಜೂರು ಠಾಣೆ ಪಿಎಸ್‌ಐ ತನ್ವೀರ್ ಹುಸೇನ್ ಅಮಾನತಿಗೆ ಪಟ್ಟು ಹಿಡಿದು ರಾಮನಗರದಲ್ಲಿ (Ramanagara) ಪ್ರತಿಭಟನಾ ಮೆರವಣಿಗೆ ಮಾಡಿದ ಸಾವಿರಾರು ವಕೀಲರು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಇದನ್ನೂ ಓದಿ: ಮಾರ್ಚ್‌ ತಿಂಗಳಲ್ಲಿ ತಮಿಳುನಾಡು ಸರ್ಕಾರಕ್ಕೆ ಜಯಲಲಿತಾ ಒಡವೆ ಹಸ್ತಾಂತರ: ಕೋರ್ಟ್‌ನಿಂದ ದಿನಾಂಕ ನಿಗದಿ

ಪ್ರತಿಭಟನೆಗೆ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಬಗ್ಗದ ಹಿನ್ನೆಲೆಯಲ್ಲಿ ಅಹೋರಾತ್ರಿ ಡಿಸಿ ಕಚೇರಿಯ ಎರಡೂ ಗೇಟ್‌ಗೆ ಬೀಗ ಜಡಿದು ಹಾಸಿಗೆ ಹಾಸಿ ವಕೀಲರು ಮಲಗಿ ಪ್ರತಿಭಟಿಸಿದ್ದಾರೆ.  ಇದನ್ನೂ ಓದಿ: ರಾಮನಗರ ಎಸ್ಪಿಯನ್ನ ಸಸ್ಪೆಂಡ್ ಮಾಡಿ – ವಕೀಲರ ಬೆಂಬಲಕ್ಕೆ ನಿಂತ ಹೆಚ್‌ಡಿಕೆ

ತನಿಖೆ ಮಾಡಿ ಕ್ರಮ ಕೈಗೊಳ್ತೇವೆ ಎಂದ ಡಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಕೀಲರು, ಡಿಸಿ, ಎಸ್‌ಪಿ ಸೇರಿ ಅಧಿಕಾರಿಗಳಿಗೆ ರಾಜಕೀಯ ಒತ್ತಡ ಇದೆ. ಡಿಸಿಎಂ ಡಿಕೆ ಶಿವಕುಮಾರ್‌, ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್ ಒತ್ತಡಕ್ಕೆ ಮಣಿದಿದ್ದಾರೆ. ಈ ಕಾರಣಕ್ಕೆ ವಿಧಾನಸೌಧ ಚಲೋಗೆ ಕರೆ ನೀಡುತ್ತಿದ್ದೇವೆ. ಈ ವೇಳೆ ಏನೇ ತೊಂದರೆ ಆದರೂ ರಾಮನಗರ ಜಿಲ್ಲಾಡಳಿತ ಹೊಣೆ ಎಂದು ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಎಚ್ಚರಿಕೆ ನೀಡಿದ್ದಾರೆ.

 

ಮೈತ್ರಿ ನಾಯಕರು ಸಾಥ್‌
ರಾಮನಗರದಲ್ಲಿ ವಕೀಲರ ಪ್ರತಿಭಟನೆಗೆ ಮೈತ್ರಿ ನಾಯಕರಾದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ (R Ashok) ಸಾಥ್‌ ನೀಡಿದ್ದಾರೆ. ಡಿಕೆ ಬ್ರದರ್ಸ್ (DK Brothers) ವಿರುದ್ಧ ಪರೋಕ್ಷವಾಗಿ ಎಚ್‌ಡಿಕೆ ವಾಗ್ದಾಳಿ ನಡೆಸಿ ಸದನದಲ್ಲಿ ಮಂಗಳವಾರ ಈ ವಿಷಯದ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಇನ್ನು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವಂತೆ ಅಶೋಕ್ ಕರೆ ನೀಡಿದ್ದಾರೆ.

ವಕೀಲರ ಪ್ರತಿಭಟನೆ ಯಾಕೆ?
ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್​ ಹಾಕಿದ್ದ ಎಸ್​ಡಿಪಿಐ ಕಾರ್ಯಕರ್ತ, ವಕೀಲ ಚಾಂದ್ ಪಾಷಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ವಕೀಲ ಚಾಂದ್‌ ಪಾಷಾ ಪ್ರಕರಣವು ಕೋಮು ಸ್ವರೂಪ ಪಡೆದು ವಕೀಲರ ಎರಡು ಬಣಗಳ ನಡುವೆ ಘರ್ಷಣೆಗೆ ಕಾರಣವಾಗಿತ್ತು. ನಂತರ ಚಾಂದ್ ಪಾಷಾರ ಕಡೆಯೊಬ್ಬರು ನೀಡಿದ್ದದೂರಿನ ಆಧಾರದ ಮೇಲೆ ಐಜೂರು ಪೊಲೀಸರು ವಕೀಲರ ಸಂಘದ 40 ವಕೀಲರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು. ಈ ಎಫ್‌ಐಆರ್‌ ರದ್ದುಗೊಳಿಸಬೇಕು ಮತ್ತು ಪಿಎಸ್‌ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ವಕೀಲರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.