ತೆರಿಗೆಯಿಂದ 100 ರೂ. ಸಂಗ್ರಹವಾದರೆ ರಾಜ್ಯಕ್ಕೆ ಸಿಗುವುದು ಕೇವಲ 13 ರೂ.- ಕೇಂದ್ರದಿಂದ ಪದೇ ಪದೇ ಅನ್ಯಾಯ: ಸಿದ್ದರಾಮಯ್ಯ ಕಿಡಿ

ಬೆಂಗಳೂರು: ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ (Karnataka) ಪದೇ ಪದೇ ಅನ್ಯಾವಾಗುತ್ತಿರುವುದನ್ನು ಖಂಡಿಸಿ ರಾಜ್ಯ ಸರ್ಕಾರ ದೆಹಲಿಯಲ್ಲಿ (Delhi) ಫೆ.7 ರಂದು ಪ್ರತಿಭಟನೆ ನಡೆಸಲಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

ವಿಧನಸೌಧದಲ್ಲಿ ಸುದೀರ್ಘ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪದೇ ಪದೇ ಕೇಂದ್ರ ಸರ್ಕಾರ ತೆರಿಗೆ (Tax) ವಿಚಾರದಲ್ಲಿ ಅನ್ಯಾಯ ಮಾಡುತ್ತಿದೆ. ಕೇಂದ್ರ ಬಜೆಟ್ (Union Budget) ಗಾತ್ರ ಡಬಲ್‌ ಆದರೆ ರಾಜ್ಯಕ್ಕೆ ಕೊಡಬೇಕಾದ ಪಾಲು ಡಬಲ್‌ ಆಗ್ಬೇಕು ಅಲ್ವಾ? ನಮ್ ಪಾಲು ಡಬಲ್‌ ಆಗಲಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಕಳೆದ 4 ವರ್ಷದಲ್ಲಿ ತೆರಿಗೆ ಹಂಚಿಕೆ ಕಡಿತದಿಂದ ಕರ್ನಾಟಕಕ್ಕೆ 45 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಈ ಕಾರಣಕ್ಕೆ ಪಕ್ಷತೀತವಾಗಿ ಪ್ರತಿಭಟನೆ ನಡೆಯಲಿದ್ದು ರಾಜ್ಯ ಎಲ್ಲಾ ಶಾಸಕರು, ಸಂಸದರು ಕೈ ಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

 

 

ಸಿದ್ದರಾಮಯ್ಯ ಹೇಳಿದ್ದೇನು?
2021-22ರ ಹಣಕಾಸು ವರ್ಷದಲ್ಲಿ ಕೇಂದ್ರಸರ್ಕಾರ ಕರ್ನಾಟಕ ರಾಜ್ಯವೊಂದರಿಂದಲೇ ಸುಮಾರು 4.75 ಲಕ್ಷ ಕೋಟಿ ರೂಪಾಯಿಗಳನ್ನು ತೆರಿಗೆ ಮೂಲಕ ಸಂಗ್ರಹಿಸಿದೆ. ಮಹಾರಾಷ್ಟ್ರ ಬಿಟ್ಟರೆ ದೇಶದಲ್ಲಿ ನಾವು ಎರಡನೇ ಸ್ಥಾನದಲ್ಲಿ ಇದ್ದೇವೆ. ಕೇಂದ್ರಸರ್ಕಾರವು ಕರ್ನಾಟಕದಿಂದ ಸಂಗ್ರಹಿಸಿದ 4.75 ಲಕ್ಷ ಕೋಟಿ ರೂ.ನಲ್ಲಿ ರಾಜ್ಯಕ್ಕೆ ತನ್ನ ಪಾಲಿನ ರೂಪದಲ್ಲಿ ಸಿಕ್ಕಿರುವುದು ಅಂದಾಜು 50,000 ಕೋಟಿ ರೂ. ಮಾತ್ರ.

ಕರ್ನಾಟಕದಿಂದ ತೆರಿಗೆ ರೂಪದಲ್ಲಿ 100 ರೂ. ಸಂಗ್ರಹವಾದರೆ ನಮಗೆ ವಾಪಸ್‌ ಬರುವುದು 12 ರಿಂದ 13 ರೂ. ಮಾತ್ರ. ಉಳಿದ ಹಣವನ್ನು ಕೇಂದ್ರ ಸರ್ಕಾರ ಇಟ್ಟುಕೊಳ್ಳುತ್ತಿದೆ. ಕೇಂದ್ರ ಬಜೆಟ್ ಗಾತ್ರ ಹೆಚ್ಚಾದರೂ ತೆರಿಗೆ ಪಾಲು ಕಡಿಮೆ ಆಗುತ್ತಿದೆ. 2018-19 ರಲ್ಲಿ ಕೇಂದ್ರದ ಬಜೆಟ್ ಗಾತ್ರ 24,42,213 ಕೋಟಿ ರೂ. ಆಗ ನಮಗೆ ಕೇಂದ್ರದ ಹಣ ಸಿಕ್ಕಿದ್ದು 46,288 ಕೋಟಿ ರೂ. 2022-23 ರಲ್ಲಿ ಕೇಂದ್ರದ ಬಜೆಟ್ ಗಾತ್ರ 41,87,232 ಕೋಟಿ ಇದ್ದರೂ ನಮಗೆ ಕೇಂದ್ರದ ಹಣ ಸಿಕ್ಕಿದ್ದು ಒಟ್ಟಾರೆ 53,510 ಕೋಟಿ ರೂ. ಅಷ್ಟೇ.

 

ಉತ್ತರಕ್ಕಿಂತ ದಕ್ಷಿಣ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣ, ಜನಸಂಖ್ಯೆಗೆ ತಕ್ಕಂತೆ ಪ್ಲಾನಿಂಗ್ ಇದೆ. ಬಡ ರಾಜ್ಯಗಳಿಗೆ ಅನುದಾನ ನೀಡಬೇಕು. ಉತ್ತರದ ರಾಜ್ಯಗಳಿಗೆ ಅನುದಾನ ಕೊಡಬೇಡಿ ಎಂದು ನಾನು ಹೇಳುತ್ತಿಲ್ಲ. ನಮಗೆ ಅನ್ಯಾಯ ಮಾಡಬೇಡಿ ಎಂದು ನಾನು ಹೇಳುತ್ತಿದ್ದೇನೆ. ರಾಜ್ಯ ಸರ್ಕಾರ ಪತ್ರ ಬರೆದರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲ. ಮಲತಾಯಿ ಧೋರಣೆ ಮಾಡುತ್ತಿದೆ. ಈ ಕಾರಣಕ್ಕೆ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ.

2017ರಲ್ಲಿ ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ಬರಪರಿಹಾರದ ರೂಪದಲ್ಲಿ ಸಿಕ್ಕಿದ್ದು ಬಿಡಿಗಾಸು ಮಾತ್ರ. ಕಳೆದು 4 ತಿಂಗಳಿಂದ ಬರಪರಿಹಾರಕ್ಕಾಗಿ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಈ ವರೆಗೆ ನಯಾಪೈಸೆ ಬಿಡುಗಡೆಯಾಗಿಲ್ಲ.

2019ರಲ್ಲಿ ಬಂದ ಭೀಕರ ನೆರೆಯಿಂದಾಗಿ ಭಾಗಶಃ ಕರ್ನಾಟಕ ಮುಳುಗಿಹೋಗಿತ್ತು, ಲಕ್ಷಾಂತರ ಜನರು ಮನೆ, ಆಸ್ತಿ ಪಾಸ್ತಿ ಕಳೆದುಕೊಂಡಿದ್ದರೆ, ನೂರಾರು ಜೀವಗಳು ಬಲಿಯಾಗಿದ್ದವು. ಆಗ ಕರ್ನಾಟಕವು ಕೇಂದ್ರ ಸರ್ಕಾರಕ್ಕೆ ರೂ.35,000 ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಿದ್ದರೆ ರಾಜ್ಯಕ್ಕೆ ಸಿಕ್ಕಿದ್ದು ಜುಜುಬಿ ರೂ. 1869 ಕೋಟಿ ಮಾತ್ರ.

ಪ್ರಸಕ್ತ ಸಾಲಿನಲ್ಲಿ ನಾಡು ಭೀಕರ ಬರದಿಂದ ತತ್ತರಿಸಿದೆ. ರಾಜ್ಯದ 216 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದ್ದು, ಒಟ್ಟು 33,770 ಕೋಟಿ ರೂ. ನಷ್ಟ ಸಂಭವಿಸಿದೆ. ಕೇಂದ್ರ ಸರ್ಕಾರಕ್ಕೆ17,901 ಕೋಟಿ ರೂ. ಬರ ಪರಿಹಾರ ಬಿಡುವಂತೆ ಕೋರಿ 4 ತಿಂಗಳುಗಳು ಕಳೆದರೂ ಈ ವರೆಗೆ ನಯಾಪೈಸೆ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಕರುನಾಡಿಗೆ ಯಾಕೆ ಈ ಅನ್ಯಾಯ ಎಂದು ಸಿಎಂ ಪ್ರಶ್ನಿಸಿದ್ದಾರೆ.