ಕಾಂಗ್ರೆಸ್‌ ತೊರೆದು ಶಿವಸೇನೆ ಸೇರ್ಪಡೆಗೊಂಡ ಮಿಲಿಂದ್‌ ದಿಯೋರಾ

ಮುಂಬೈ: ಇಂದು ಬೆಳಗ್ಗೆಯಷ್ಟೇ ಕಾಂಗ್ರೆಸ್‌ (Congress) ತೊರೆದಿದ್ದ ಮಿಲಿಂದ್‌ ದಿಯೋರಾ (Milind Deora) ಅವರು ಇದೀಗ ಶಿವಸೇನೆಗೆ ಸೇರ್ಪಡೆಗೊಂಡಿದ್ದಾರೆ.

ಇಂದು ಮಧ್ಯಾಹ್ನ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನೆಯ (Shiva Sena) ಕೈ ಹಿಡಿದಿದ್ದಾರೆ. ಶಿಂಧೆ ಅವರು ಹೂಗುಚ್ಚ ನೀಡಿ ಬಳಿಕ ಪಕ್ಷದ ಬಾವುಟ ಕೊಟ್ಟು ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಮೊದಲು ಪಕ್ಷದ ನಾಯಕರಿಗೆ ನ್ಯಾಯ ಕೊಡಿಸಲಿ- ʼಕೈʼ ಯಾತ್ರೆಗೆ ಅಮಿತ್‌ ಮಾಳವಿಯಾ ವ್ಯಂಗ್ಯ

ಬೆಳಗ್ಗೆಯಷ್ಟೇ ತಮ್ಮ ಸಾಮಾಜಿಕ ಜಾಲತಾಣದ ಖಾತೆ ಎಕ್ಸ್‌ನಲ್ಲಿ ಮಿಲಿಂದ್‌ ದಿಯೋರಾ ಅವರು ಪಕ್ಷ ತೊರೆಯುವುದಾಗಿ ಘೊಷಣೆ ಮಾಡಿದ್ದರು. ಇದಾದ ಬಳಿಕ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆಗೆ ಮಿಲಿಂದ್‌ ಅವರು ಸೇರುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಆದರೆ ಮಧ್ಯಾಹ್ನದ ವೇಳೆಗೆ ಈ ಊಹಾಪೋಹಗಳು ಸರಿಯಾಗಿವೆ. ಶಿವಸೇನೆ ಸೇರುವುದಕ್ಕೂ ಮುನ್ನ ಮಿಲಿಂದ್‌ ಅವರು ತಮ್ಮ ಕುಟುಂಬದ ಜೊತೆಗೆ ದೇವರ ದರ್ಶನ ಪಡೆದಿದ್ದಾರೆ.

ಮಿಲಿಂದ್‌ ಅವರು ಸದ್ಯ ಶಿವಸೈನಿಕರಾಗಿದ್ದಾರೆ. ಇಂದು ಬೆಳಗ್ಗೆಯೇ ಕಾಂಗ್ರೆಸ್ (Congress) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ದಿಯೋರಾ ಅವರು ಶನಿವಾರದವರೆಗೂ ಕಾಂಗ್ರೆಸ್ ತೊರೆಯುವ ಸುದ್ದಿ ಕೇವಲ ವದಂತಿ ಎಂದು ಹೇಳಲಾಗಿತ್ತು. ಆದರೆ ಇಂದು ಕೈ ತೊರೆಯುವ ಬಗ್ಗೆ ಘೊಷಣೆ ಮಾಡಿದ್ದರು.

ಇಂದು ನನ್ನ ರಾಜಕೀಯ ಪಯಣದಲ್ಲಿ ಮಹತ್ವದ ಅಧ್ಯಾಯವೊಂದು ಮುಕ್ತಾಯವಾಗಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಪಕ್ಷದೊಂದಿಗೆ ನನ್ನ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದೇನೆ. ನಾನು ಎಲ್ಲಾ ನಾಯಕರು, ಸಹೋದ್ಯೋಗಿಗಳು ಹಾಗೂ ಕೃತಜ್ಞನಾಗಿದ್ದೇನೆ ಎಂದು ಮಿಲಿಂದ್‌ ಅವರು ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. ಇದೀಗ ಶಿವಸೇನೆ ಸೇರುವ ಮೂಲಕ ಎಲ್ಲಾ ವದಂತಿಗಳಿಗೆ ತೆರ ಎಳೆದಿದ್ದಾರೆ.