ಬಿಜೆಪಿಯಿಂದ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ ಅಭಿಯಾನ; ಮನೆ ಮನೆಗೆ ಮಂತ್ರಾಕ್ಷತೆ ಹಂಚಿದ ಬಿಎಸ್‌ವೈ, ವಿಜಯೇಂದ್ರ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ ಪವಿತ್ರ ಮಂತ್ರಾಕ್ಷತೆ ವಿತರಣೆ ಅಭಿಯಾನಕ್ಕೆ ಚಾಲನೆ ಕೊಡಲಾಗಿದೆ. ರಾಮನಗರಿಯಿಂದ ತಂದಿರುವ ಮಂತ್ರಾಕ್ಷತೆಯನ್ನು ಮನೆಮನೆಗೆ ವಿತರಣೆ ಅಭಿಯಾನದಲ್ಲಿಂದು ಮಾಜಿ ಸಿಎಂ ಯಡಿಯೂರಪ್ಪ (Yediyurappa), ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra), ಶಾಸಕ ಗೋಪಾಲಯ್ಯ ಭಾಗವಹಿಸಿದ್ದರು.

ರಾಜಧಾನಿ ಬೆಂಗಳೂರಿನಲ್ಲಿಂದು (ಭಾನುವಾರ) ಬಿಜೆಪಿ ನಾಯಕರಲ್ಲಿ ರಾಮೋತ್ಸವ ಸಡಗರ ಮನೆ ಮಾಡಿತ್ತು. ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಬಿಜೆಪಿ ಕೈಗೊಂಡಿರುವ ಮಂತ್ರಾಕ್ಷತೆ ವಿತರಣೆ ಅಭಿಯಾನದಲ್ಲಿ ರಾಜ್ಯ ನಾಯಕರು, ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಡಾಲರ್ಸ್ ಕಾಲೊನಿಯ ಮನೆಮನೆಗಳಿಗೆ ಅಯೋಧ್ಯೆಯಿಂದ ತಂದ ಪವಿತ್ರ ಮಂತ್ರಾಕ್ಷತೆ ವಿತರಿಸಿದ್ರು. ಜಸ್ಟಿಸ್ ಪತ್ರಿ ಬಸನಗೌಡ ಸೇರಿ ಹಲವು ಮನೆಗಳಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತೆರಳಿ ಮಂತ್ರಾಕ್ಷತೆ ವಿತರಿಸಿದರು. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಯ ದಿನವಾದ ಜ.22ರಂದು ಮನೆಗಳಲ್ಲಿ ಪೂಜೆ ಸಲ್ಲಿಸುವಂತೆ ಬಿಎಸ್ವೈ ಕೋರಿದರು‌. ಇದನ್ನೂ ಓದಿ: ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ರಾಮ, ಆಂಜನೇಯ, ಸುಗ್ರೀವರು ಭೇಟಿಯಾಗಿದ್ದ ಚಂಚಲಕೋಟೆ ಬಗ್ಗೆ ನಿಮ್ಗೆ ಗೊತ್ತಾ?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶೇಷಾದ್ರಿಪುರಂ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪೂಜೆ ನೆರವೇರಿಸುವುದರೊಂದಿಗೆ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ರು. ಮನೆ ಮನೆಗೆ ತೆರಳಿ ವಿಜಯೇಂದ್ರ ಮಂತ್ರಾಕ್ಷತೆ‌ ವಿತರಿಸಿದರು. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠೆಯಾಗಲಿದೆ. ಅದೇ ದಿನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸಂಜೆ ಮನೆ ಮುಂದೆ ಉತ್ತರಾಭಿಮುಖವಾಗಿ ಐದು ದೀಪಗಳನ್ನು ಬೆಳಗಿಸುವ ಮೂಲಕ ಪುಣ್ಯ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡಿನ ಬೋವಿಪಾಳ್ಯದ ಗಣೇಶ ದೇವಸ್ಥಾನ ಬಳಿಯಲ್ಲಿ ಇಂದು ಅಯೋಧ್ಯಾ ಶ್ರೀರಾಮ ಮಂದಿರ ಮಂತ್ರಾಕ್ಷತೆ ಮಹಾ ಅಭಿಯಾನಕ್ಕೆ ಶಾಸಕ ಕೆ.ಗೋಪಾಲಯ್ಯ ಚಾಲನೆ ನೀಡಿದರು. ಇದೇ ವೇಳೆ ಮಾಜಿ ಉಪಮೇಯರ್ ಎಸ್.ಹರೀಶ್ ಮತ್ತಿತರ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಒಟ್ಟಿನಲ್ಲಿ ಮಂತ್ರಾಕ್ಷತೆ ವಿತರಣೆ ಇಡೀ ರಾಜ್ಯದಲ್ಲಿ ನಡೆಯುತ್ತಿದ್ದು, ಬಿಜೆಪಿ ಪಾಳಯ ಸಂಭ್ರಮದಿಂದ ಪಾಲ್ಗೊಂಡಿದೆ. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆ- ತಯಾರಾಗುತ್ತೆ 7 ಸಾವಿರ ಕೆ.ಜಿಯ ರಾಮ ಹಲ್ವಾ