ಆದಿತ್ಯ-L1 ಮಿಷನ್‌ ಸಕ್ಸಸ್‌; ನಿಗದಿತ ಕಕ್ಷೆ ತಲುಪಿದ ನೌಕೆ – ISRO ಸಾಧನೆಗೆ ಮೋದಿ ಮೆಚ್ಚುಗೆ

ಬೆಂಗಳೂರು: 110 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಇಸ್ರೋ ಆದಿತ್ಯ ಎಲ್1 (Aditya-L1) ನೌಕೆಯು ‌15 ಲಕ್ಷ ಕಿಮೀ ಕ್ರಮಿಸಿ ಅಂತಿಮ ಕಕ್ಷೆ ತಲುಪಿದೆ. ಈ ಮೂಲಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಸಜ್ಜಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC-SHAR) ಆದಿತ್ಯ-L1 ಏಳು ಪೇಲೋಡ್‌ಗಳೊಂದಿಗೆ ಉಡಾವಣೆಗೊಂಡಿತ್ತು. ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿರುವ L1 ಪಾಯಿಂಟ್‌ ಕಡೆಗೆ ಭೂ ಕಕ್ಷೆಯಿಂದ ಬಾಹ್ಯಾಕಾಶ (Space) ನೌಕೆಯನ್ನು ಕಳುಹಿಸಿತ್ತು. ಶನಿವಾರ ಬೆಳಗ್ಗಿನಿಂದಲೇ ಹಾಲೋ ಆರ್ಬಿಟ್ ಅಳವಡಿಕೆಯ ಕಾರ್ಯವನ್ನು ಮುಂದುವರಿಸಿ ಲಗ್ರೇಂಜ್‌ ಪಾಯಿಂಟ್-1 ರಲ್ಲಿ ಇರಿಸಲು ಪ್ರಾರಂಭಿಸಿತ್ತು. ಅಂದುಕೊಂಡಂತೆ ಆದಿತ್ಯ ಎಲ್‌-1 ನೌಕೆಯು ನಿಗದಿತ ಕಕ್ಷೆ ತಲುಪಿದ್ದು, ದೊಡ್ಡ ಯಶಸ್ಸು ತಂದುಕೊಟ್ಟಿದೆ. 2023ರ ಚಂದ್ರಯಾನ-3 ಯಶಸ್ವಿ ಬಳಿಕ ಇಸ್ರೋ (ISRO) ಸ್ಥಾಪಿಸಿದ ಮಹತ್ವದ ಮೈಲುಗಲ್ಲು ಇದಾಗಿದೆ.

ಇನ್ಮುಂದೆ ಆದಿತ್ಯ L1 ನೌಕೆಯು ನಿಗದಿತ ಕಕ್ಷೆಯಲ್ಲಿ ನಿಂತು ಹಗಲು, ರಾತ್ರಿ ಹಾಗೂ ಗ್ರಹಣಗಳ ಅಡೆತಡೆ ಇಲ್ಲದೇ ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅಂತರಿಕ್ಷದ ವಾತಾವರಣದ ಮೇಲೆ ಅದರ ಪರಿಣಾಮವನ್ನು ಅಧ್ಯಯನ ನಡೆಸಲಿದೆ.

ಇಸ್ರೋದ ಮಹತ್ವದ ಸಾಧನೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಭಾರತ ಮತ್ತೊಂದು ಹೆಗ್ಗುರುತನ್ನು ಸೃಷ್ಟಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯ ಆದಿತ್ಯ-ಎಲ್1 ತನ್ನ ಗಮ್ಯಸ್ಥಾನವನ್ನು ತಲುಪಿದೆ. ಇದು ಅತ್ಯಂತ ಸಂಕೀರ್ಣ ಮತ್ತು ಸಂಕೀರ್ಣವಾದ ಬಾಹ್ಯಾಕಾಶ ಕಾರ್ಯಾಚರಣೆಗಳ ನಡುವೆ ಸಾಕ್ಷಾತ್ಕಾರದಲ್ಲಿ ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಅಸಾಧಾರಣ ಸಾಧನೆಯನ್ನು ದೇಶದ ಜನತೆಯೊಂದಿಗೆ ಸೇರಿ ಶ್ಲಾಘಿಸುತ್ತೇನೆ. ಜೊತೆಗೆ ಮಾನವ ಪ್ರಯೋಜನಗಳಿಗಾಗಿ ವಿಜ್ಞಾನದ ಅನ್ವೇಷಣೆಗಳನ್ನು ಮುಂದುವರಿಸುತ್ತೇವೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸೂರ್ಯನತ್ತ ಜಿಗಿದವರು ಯಾರ‍್ಯಾರು?
1960ರಲ್ಲಿ ಅಮೆರಿಕ ನಾಸಾ ಕೈಗೊಂಡಿದ್ದ ಪಯೋನಿರ್‌-5 ಮೊಟ್ಟ ಮೊಲದ ಸೂರ್ಯನ ಅನ್ವೇಷಣೆಯಾಗಿತ್ತು. ಈವರೆಗೆ ಒಟ್ಟು 14 ಬಾರಿ ಸೂರ್ಯನ ಅನ್ವೇಷಣೆಗಳನ್ನ ಕೈಗೊಂಡಿದೆ. ಅಮೆರಿಕ, ಜರ್ಮನಿ ಹಾಗೂ ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆ ಸೇರಿ ಒಟ್ಟು 22 ಬಾರಿ ಸೂರ್ಯನ ಕಾರ್ಯಾಚರಣೆ ನಡೆದಿದೆ

ಯಾವುದು ಹೇಗೆ ಕಾರ್ಯ ನಿರ್ವಹಿಸುತ್ತವೆ?
* ವಿಸಿಬಲ್ ಎಮಿಷನ್ ಲೈನ್ ಕರೊನಾಗ್ರಾಫ್ (VELC):
ಈ ಪೇಲೋಡ್ ಸೂರ್ಯನ ವಾತಾವರಣದ ಅತ್ಯಂತ ಹೊರಪದರವಾದ ಕರೊನಾದ ಚಿತ್ರಗಳನ್ನು ಸೆರೆಹಿಡಿಯುತ್ತದೆ.

* ಸೋಲಾರ್ ಅಲ್ಟ್ರಾವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT):
ಈ ಪೇಲೋಡ್ ಸೂರ್ಯನ ವಾತಾವರಣದ ಒಂದು ಪದರವಾದ ಕ್ರೋಮೊಸ್ಪಿಯರ್ ಚಿತ್ರಗಳನ್ನ ತೆಗೆಯಲಿದೆ. ಈ ಕ್ರೋಮೊಸ್ಪಿಯರ್ ಎನ್ನುವುದು ಸೂರ್ಯನ ವಾತಾವರಣದಲ್ಲಿ ಫೋಟೊಸ್ಪಿಯ‌ರ್‌ ಮೇಲಿರುತ್ತದೆ.

* ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪಿರಿಮೆಂಟ್‌ (ASPEX):
ಈ ಪೇಲೋಡ್ ಸೋಲಾರ್‌ ವಿಂಡ್, ಅಂದರೆ ಚಾರ್ಜ್‌ ಹೊಂದಿರುವ ಕಣಗಳ ಚಲನೆಯನ್ನ ಅಳೆಯಲು ಬಳಕೆಯಾಗುತ್ತದೆ.

* ಪ್ಲಾಸ್ಮಾ ಅನಲೈಸರ್ ಪ್ಯಾಕೇಜ್ ಫಾರ್ ಆದಿತ್ಯ (PAPA):
ಈ ಪೇಲೋಡ್‌ ಸೂರ್ಯನ ಸುತ್ತಲೂ ಇರುವ ಪ್ಲಾಸ್ಮಾ ಅಥವಾ ಚಾರ್ಜ್ ಹೊಂದಿರುವ ಅನಿಲವನ್ನ ಅಳೆಯಲು ನೆರವಾಗುತ್ತದೆ.

* ಸೋಲಾರ್ ಲೋ ಎನರ್ಜಿ ಎಕ್ಸ್-ರೇ ಸ್ಪೆಕ್ಟೋಮೀಟ‌ರ್‌ (SOLEXS):
ಸೂರ್ಯನಿಂದ ಹೊರಬರುವ ಉತ್ಕೃಷ್ಟ ಶಕ್ತಿಯ ಎಕ್ಸ್-ರೇಗಳನ್ನು ಅಳೆಯುವ ಪೇಲೋಡ್ ಇದು.

* ಹೈ ಎನರ್ಜಿ ಎಲ್1 ಆರ್ಬಿಟಿಂಗ್ ಎಕ್ಸ್ ರೇ ಸೆಕ್ಟೋಮೀಟರ್ (HEL1OS):
ಈ ಪೇಲೋಡ್ ಸೂರ್ಯನಿಂದ ಹೊರಬರುವ ಹೈ ಎನರ್ಜಿ ಎಕ್ಸ್ ರೇ ಹೊರಸೂಸುವಿಕೆಯನ್ನು ಅಳೆಯುತ್ತದೆ.

* ಮ್ಯಾಗ್ನೆಟೊಮೀಟರ್:
ಸೂರ್ಯನ ಮತ್ತು ಸುತ್ತಮುತ್ತಲಿನ ಕಾಂತಕ್ಷೇತ್ರವನ್ನು ಅಳೆಯುವ ಪೇಲೋಡ್ ಇದು.