ದತ್ತಪೀಠ ಕೇಸಲ್ಲಿ 7 ವರ್ಷದ ಬಳಿಕ ಆರೋಪಿಗಳಿಗೆ ಸಮನ್ಸ್- ಇದು ಸರ್ಕಾರದ ಹುನ್ನಾರವೆಂದ ಬಿಜೆಪಿ

– ಈ ಆರೋಪ ಸುಳ್ಳು ಎಂದ ಸಿಎಂ ಕಚೇರಿ

ಚಿಕ್ಕಮಗಳೂರು: ಬಾಬಾಬುಡನ್‍ಗಿರಿಯಲ್ಲಿ (Baba budan Giri) ಗೋರಿ ದ್ವಂಸ ಪ್ರಕರಣದಲ್ಲಿ ಆರೋಪಿಗಳಿಗೆ ಕೋರ್ಟ್ ಸಮನ್ಸ್ ಜಾರಿಯಾಗಿದೆ. ಜನವರಿ 8ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ಕೊಟ್ಟಿದೆ. ಆದರೆ ಇದರಲ್ಲಿಯೂ ಸರ್ಕಾರದ ಪಾತ್ರ ಇದೆ ಎಂದು ಬಿಜೆಪಿಗರು (BJP) ಎಕ್ಸ್ ಮಾಡಿದ್ದು ಇವತ್ತು ಸಾಕಷ್ಟು ಸುದ್ದಿಯಾಗಿದೆ.

ವಿಪಕ್ಷ ನಾಯಕ ಆರ್.ಅಶೋಕ್ (R Ashok) ಎಕ್ಸ್ ಮಾಡಿ, 31 ವರ್ಷ ಹಳೆಯ ಪ್ರಕರಣಕ್ಕೆ ಮರುಜೀವ ನೀಡಿ ಹುಬ್ಬಳ್ಳಿಯಲ್ಲಿ ಕರಸೇವಕರನ್ನು ಬಂಧಿಸಿದ್ದಾಯ್ತು. ಈಗ 7 ವರ್ಷ ಹಳೆಯ ದತ್ತಪೀಠ (Dattapita) ಪ್ರಕರಣವನ್ನು ಮರುತನಿಖೆ ಮಾಡಲು ಸರ್ಕಾರ ಹುನ್ನಾರ ನಡೆಸಿದೆ. ಇದು ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ಬೆನ್ನಲ್ಲೇ ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿತು. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣಕ್ಕೆ ಟ್ವಿಸ್ಟ್- ಕರಸೇವಕನ ಮೇಲಿನ ಕ್ರಿಮಿನಲ್ ಕೇಸ್‍ಗಳೆಷ್ಟು?

ದತ್ತಪೀಠದ ಕೇಸನ್ನು ಸರ್ಕಾರ ರೀಓಪನ್ ಮಾಡಿಲ್ಲ. ಬದಲಿಗೆ 2017ರಲ್ಲಿ ದಾಖಲಾಗಿದ್ದ ಪ್ರಕರಣದ ಸಹಜ ಕಾನೂನು ಪ್ರಕ್ರಿಯೆಯ ಭಾಗವಾಗಿ ಆರೋಪಿಗಳಿಗೆ ನ್ಯಾಯಾಲಯದ ಸಮನ್ಸ್ ಜಾರಿ ಆಗಿದೆ ಅಷ್ಟೆ. 2017ರ ಪ್ರಕರಣಕ್ಕೆ ಸಂಬಂಧಿಸಿ 2020ರ ಮಾರ್ಚ್ 19 ರಂದು ವಿಚಾರಣೆಗೆ ಅನುಮತಿಗಾಗಿ ಸರ್ಕಾರಕ್ಕೆ ಮನವಿ ಬಂದಿತ್ತು. ಇದರ ಆಧಾರದಲ್ಲಿ 2023ರ ಸೆಪ್ಟೆಂಬರ್ 7 ರಂದು ಸರ್ಕಾರ ಅನುಮತಿ ನೀಡಿತ್ತು. ಅಕ್ಟೋಬರ್ 24 ರಂದು ಆರೋಪಿಗಳ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆಯಾಗಿತ್ತು. ಈ ಕಾನೂನು ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಕೋರ್ಟ್‍ನಿಂದ ಸಮನ್ಸ್ ಜಾರಿಯಾಗಿದೆ. ಜನವರಿ 8ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಇದಿಷ್ಟೂ ಯಾವುದೇ ಒಂದು ಕೇಸಲ್ಲಿ ಸಹಜವಾಗಿ ನಡೆಯುವ ಕಾನೂನು ಪ್ರಕ್ರಿಯೆ ಎಂದು ಸಿಎಂ ಕಚೇರಿ ಸ್ಪಷ್ಟೀಕರಣ ನೀಡಿದೆ.

ಮಾಜಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಮಾತ್ರ, ಈ ವಾದ ಒಪ್ಪಲು ತಯಾರಿಲ್ಲ. ಈ ಕೇಸಲ್ಲಿ ಯಾವುದೇ ಹುರುಳಿಲ್ಲ. ಚಾರ್ಜ್‍ಶೀಟ್ ಹಾಕದೇ ಕ್ಲೋಸ್ ಮಾಡೋ ಕೇಸ್ ಇದು. ನಾವು ಕ್ಲೋಸ್ ಮಾಡಲು ಮುಂದಾಗಿದ್ವಿ. ಆದರೆ ತಡ ಆಯ್ತು. ಈಗ ಸಿದ್ದರಾಮಯ್ಯ ಸರ್ಕಾರ ವಿಚಾರಣೆಗೆ ಅನುಮತಿಸಿ ಹಿಂದೂ ಕಾರ್ಯಕರ್ತರ ನೆಮ್ಮದಿ ಕೆಡಿಸಿದೆ ಎಂದು ಗಂಭೀರ ಆರೋಪಿಸಿದ್ದಾರೆ.

ವಿಜಯೇಂದ್ರ ಎಕ್ಸ್ ಮಾಡಿ, ನಿಮ್ಮ ಹಿಂದೂ ದ್ವೇಷದ ಬೆಟ್ಟ ನಿಮಗೆಷ್ಟು ಬೇಕೋ ಅಗೆಯಿರಿ. ಇನ್ನಷ್ಟು ಆಳಕ್ಕೂ ಇಳಿದು ಬಗೆಯಿರಿ. ನಿಮಗೇನೂ ದಕ್ಕದು, ಹಿಂದೂ ಕಾರ್ಯಕರ್ತರ ಒಂದೇ ಒಂದು ರೋಮವನ್ನೂ ಕೊಂಕಿಸಲೂ ಸಾಧ್ಯವಾಗದು. ಹನುಮನ ಸುಡಲು ಹೋಗಿ ಲಂಕೆಗೆ ಬೆಂಕಿ ಹಚ್ಚಿಸಿಕೊಂಡ ರಾವಣನ ಸ್ಥಿತಿಗೆ ನಿಮ್ಮ ಸರ್ಕಾರ ತಲುಪುತ್ತಿದೆ ಎಂದು ಕಿಡಿಕಾರಿದ್ದಾರೆ.