BSY ವಿರುದ್ಧ ಆರೋಪದ ನಡುವೆಯೇ ವಿಜಯಪುರಕ್ಕೆ ವಿಜಯೇಂದ್ರ ಭೇಟಿ- ಜಿಲ್ಲಾ ಬಿಜೆಪಿಯಲ್ಲಿ ಸಂಚಲನ

ವಿಜಯಪುರ: ಕಳೆದ ವಿಧಾನಸಭೆ ಚುನಾವಣೆಗೆ ಮುಂಚೆ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಸಿಎಂ ಆಗಿದ್ದ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪಗಳ ಸುರಿಮಳೆ ಸುರಿಸಿದರು. ಬಳಿಕ ಚುನಾವಣೆ ವೇಳೆ ಯಡಿಯೂರಪ್ಪ ನಮ್ಮ ಹಿರಿಯರು ಅಂತಾ ಹೇಳಿ ಆಶ್ಚರ್ಯ ಮೂಡಿಸಿದರು. ರಾಜ್ಯ ಬಿಜೆಪಿಯ (BJP) ಚುಕ್ಕಾಣಿಯನ್ನ ವಿಜಯೇಂದ್ರ (BY Vijayendra) ಹಿಡಿಯುತ್ತಿದಂತೆ ಇದೀಗ ಮತ್ತೆ ಯತ್ನಾಳ್ ಯಡಿಯೂರಪ್ಪ (B S Yediyurappa) ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಈ ಅಂತರ್ ಯುದ್ಧದ ಮಧ್ಯೆ ವಿಜಯೇಂದ್ರ ಅವರು ಯತ್ನಾಳ್ ಅಡ್ಡಾಕ್ಕೆ ಲಗ್ಗೆ ಇಡುತ್ತಿದ್ದಾರೆ.

ಹೌದು. ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿದ ಮೇಲೆ ಪ್ರಥಮ ಬಾರಿಗೆ ವಿಜಯಪುರ ನಗರಕ್ಕೆ ವಿಜಯೇಂದ್ರ ಪಾದಾರ್ಪಣೆ ಮಾಡುತ್ತಿದ್ದಾರೆ. ಶನಿವಾರ ವಿಜಯಪುರ ನಗರಕ್ಕೆ ವಿಜಯೇಂದ್ರ ಆಗಮಿಸುತ್ತಿದ್ದು, ನಗರದ ಜಿಲ್ಲಾ ಬಿಜೆಪಿ ಕಛೇರಿಗೆ ಭೇಟಿ ನೀಡಲಿದ್ದಾರೆ. ಬಿಜೆಪಿ ನಾಯಕರ ಸಭೆ ನಡೆಸಿ ಜಿಲ್ಲಾ ಬಿಜೆಪಿಯ ಸಂಘಟನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನಂತರ ನಗರದ ಆಶ್ರಮದಲ್ಲಿರುವ ಶ್ರೀ ಸಿದ್ದೇಶ್ವರ ಆಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಲಿಂಗೈಕ್ಯದ ಹಿನ್ನೆಲೆ ನಡೆಯುತ್ತಿರುವ ಗುರುನಮನ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಸಹಜವಾಗಿಯೇ ಬಿಜೆಪಿ ರಾಜ್ಯಧ್ಯಕ್ಷರ ವಿಜಯಪುರ ಭೇಟಿಯಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿದ್ರೆ, ಇನ್ನೊಂದೆಡೆ ಯತ್ನಾಳ್ ವಿರೋಧಿಗಳಲ್ಲಿ ಕುತೂಹಲ ಕೂಡ ಮೂಡಿದೆ. ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಮಾಡಿರುವ ಯತ್ನಾಳ್ ವಿರುದ್ಧ ಕ್ರಮದ ಬಗ್ಗೆ ವಿಜಯೇಂದ್ರ ಘೋಷಿಸಿಸುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ಕೋವಿಡ್‌ ವೇಳೆ 40 ಸಾವಿರ ಕೋಟಿ ಅವ್ಯವಹಾರ, 45 ರೂ. ಮಾಸ್ಕ್‌ಗೆ 485 ರೂ. ಬಿಲ್‌: ಯತ್ನಾಳ್‌ ಬಾಂಬ್‌

ಯತ್ನಾಳ್ ಆರೋಪ ಏನು..?: ಬಿಜೆಪಿ ಸರ್ಕಾರದಲ್ಲಿಯೇ ಭಾರೀ ಕೋವಿಡ್ ಹಗರಣ ನಡೆದಿದೆ. ಕೊರೋನಾ ವೇಳೆ 40 ಸಾವಿರ ಕೋಟಿ ಅವ್ಯವಹಾರ ನಡೆದಿದೆ. ಡಿಕೆಶಿ ಕೇಸ್ ಬಳಿಕ ಅಪ್ಪಾಜಿಯದ್ದೇ, ತನಿಖೆ ಮಾಡಿಸುವೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ 45 ರೂಪಾಯಿ ಮಾಸ್ಕ್‍ಗೆ 485 ಬಿಲ್ ಹಾಕಿದ್ದಾರೆ. 10 ಸಾವಿರ ಬೆಡ್‍ಗಳ ಬಾಡಿಗೆ ಬಿಲ್‍ನಲ್ಲಿ ಬೆಡ್ ಖರೀದಿ ಮಾಡಿದ್ರೆ, ಎರಡು ಬೆಡ್ ಬರ್ತಿದ್ವು. ಒಂದು ಬೆಡ್‍ಗೆ 20 ಸಾವಿರ ಬಾಡಿಗೆ, 20 ಸಾವಿರದಲ್ಲಿ ಹೊಸ ಬೆಡ್ ಬರುತ್ತಿತ್ತು. ಮಾಸ್ಕ್, ಬೆಡ್‍ಗಳಲ್ಲಿಯು ಭ್ರಷ್ಟಾಚಾರ ನಡೆದಿದೆ ಎಂದು ಸ್ವಪಕ್ಷದ ನಾಯಕನ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರು. ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿ ಅಥವಾ ನೋಟಿಸ್ ನೀಡಲಿ ಅವರ ಬಗ್ಗೆ ಉಚ್ಚಾಟನೆ ಮಾಡಿದ ಮರುದಿನ ಎಲ್ಲಾ ಹೇಳ್ತೀನಿ. ದಾಖಲೆ ಬಿಡುಗಡೆ ಮಾಡೋದಾಗಿ ಬಹಿರಂಗ ಸವಾಲ್ ಹಾಕಿದ್ದರು.