ಅಯೋಧ್ಯೆ ಮಸೀದಿ ತಾಜ್‌ಮಹಲ್‌ಗಿಂತಲೂ ಸುಂದರವಾಗಿರುತ್ತೆ: ಬಿಜೆಪಿ ಮುಖಂಡ ಹಾಜಿ ಶೇಖ್‌

ಮುಂಬೈ: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಮೊಹಮ್ಮದ್‌ ಬಿನ್‌ ಅಬ್ದುಲ್ಲಾ ಮಸೀದಿಯು (Ayodhya Mosque) ತಾಜ್‌ಮಹಲ್‌ಗಿಂತಲೂ ಸುಂದರವಾಗಿರಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಅಯೋಧ್ಯೆ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಜಿ ಅರ್ಫಾತ್‌ ಶೇಖ್‌ (Haji Arfat Shaikh) ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯ ಶಿಲಾನ್ಯಾಸ ಮುಂದಿನ ವರ್ಷ ನಡೆಯಲಿದೆ. ಈ ಸಮಾರಂಭಕ್ಕೆ ಸಂತರು, ಪೀರರು ಮತ್ತು ಧರ್ಮಗುರುಗಳನ್ನು ಆಹ್ವಾನಿಸಲಾಗುವುದು ಎಂದು ಶೇಖ್‌ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಿಮ್ಮ ಪ್ರೀತಿ, ವಿಶ್ವಾಸ, ವಾತ್ಸಲ್ಯಕ್ಕೆ ನಾನು ಋಣಿ: ಮೋದಿ ವಿಶ್‍ಗೆ ಹೆಚ್‍ಡಿಕೆ ಧನ್ಯವಾದ

ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಈ ಮಸೀದಿಯ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಮಸೀದಿ ಸಿದ್ಧವಾದಾಗ, ಮೆಕ್ಕಾ ಮಸೀದಿಯಲ್ಲಿ ನಮಾಜ್‌ನ ನೇತೃತ್ವ ವಹಿಸುವ ಇಮಾಮ್-ಎ-ಹರಾಮ್ ಸೇರಿದಂತೆ ಎಲ್ಲಾ ದೇಶಗಳ ಉನ್ನತ ಧರ್ಮಗುರುಗಳನ್ನು ಆಹ್ವಾನಿಸಲಾಗುವುದು ಎಂದು ಹೇಳಿದ್ದಾರೆ.

ಬಾಬ್ರಿ ಮಸೀದಿಯ ಬದಲಿಗೆ ಪ್ರವಾದಿಯ ಹೆಸರನ್ನು ಇಡಲಾಗಿದೆ. ಅಯೋಧ್ಯೆಯಿಂದ 25 ಕಿಮೀ ದೂರದಲ್ಲಿರುವ ಧನ್ನಿಪುರದ ಬೇರೆ ಸ್ಥಳದಲ್ಲಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ನಿರ್ಮಿಸಲಾಗುತ್ತಿದೆ. ಅಯೋಧ್ಯೆ ರಾಮಮಂದಿರ ವಿವಾದದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಂತೆ ಮಸೀದಿ ನಿರ್ಮಾಣಕ್ಕೆ ಮತ್ತೊಂದು ಜಾಗವನ್ನು ರಾಜ್ಯ ಸರ್ಕಾರ ನೀಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ಭದ್ರತಾ ಲೋಪ- 6ನೇ ಆರೋಪಿ ಅರೆಸ್ಟ್

ಮಸೀದಿ ಪಕ್ಕದಲ್ಲಿರುವ ಜಾಗದಲ್ಲಿ ದಂತಚಿಕಿತ್ಸೆ, ಕಾನೂನು, ವಾಸ್ತುಶಾಸ್ತ್ರ ಹಾಗೂ ಅಂತಾರಾಷ್ಟ್ರೀಯ ಸಂಬಂಧ ವಿಷಯಗಳನ್ನು ಬೋಧಿಸುವ ಕಾಲೇಜು ನಿರ್ಮಿಸಲಾಗುವುದು. ಅಲ್ಲದೇ ಕ್ಯಾನ್ಸರ್‌ ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗೆ ಸುಸಜ್ಜಿತ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಎರಡು ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದಿದ್ದಾರೆ.