ದೆಹಲಿಯಲ್ಲಿ ಸಿನಿಮೀಯ ರೀತಿಯಲ್ಲಿ ಗುಂಡಿನ ಚಕಮಕಿ- ಇಬ್ಬರು ಶಾರ್ಪ್ ಶೂಟರ್‌ಗಳ ಬಂಧನ

ನವದೆಹಲಿ: ಕೆನಡಾ (Canada) ಮೂಲದ ಖಲಿಸ್ತಾನಿ ಭಯೋತ್ಪಾದಕ, ಗ್ಯಾಂಗ್‌ಸ್ಟರ್ ಅರ್ಷದೀಪ್ ದಲ್ಲಾ (Arshdeep Dalla) ಕಡೆಯ ಸದಸ್ಯರು ಮತ್ತು ದೆಹಲಿ ವಿಶೇಷ ಪೊಲೀಸರ ತಂಡ ನಡುವೆ ಸಿನಿಮೀಯ ರೀತಿಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಭಾನುವಾರ ತಡರಾತ್ರಿ ಮಯೂರ್ ವಿಹಾರದ ಅಕ್ಷರಧಾಮ ಮಂದಿರ ಬಳಿ ಘಟನೆ ನಡೆದಿದ್ದು, ಘಟನೆ ಬಳಿಕ ಇಬ್ಬರು ಕ್ರಿಮಿನಲ್‌ಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜ್‌ಪ್ರೀತ್ ಸಿಂಗ್ ಅಲಿಯಾಸ್ ರಾಜಾ ಅಲಿಯಾಸ್ ಬಾಂಬ್ ಮತ್ತು ವೀರೇಂದ್ರ ಸಿಂಗ್ ಅಲಿಯಾಸ್ ವಿಮ್ಮಿ ಎಂಬವರನ್ನು ಬಂಧಿಸಿದ್ದು, ಇಬ್ಬರೂ ಶಾರ್ಪ್ ಶೂಟರ್‌ಗಳಾಗಿ (Sharp Shooters) ಗ್ಯಾಂಗ್‌ಸ್ಟರ್ ಅರ್ಷದೀಪ್ ಸಿಂಗ್ ಜೊತೆಗೆ ಗುರುತಿಸಿಕೊಂಡಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಇಬ್ಬರೂ ಶೂಟರ್‌ಗಳು ಪರೋಲ್ ಅಂತ್ಯಗೊಂಡ ನಂತರವೂ ತಲೆಮರೆಸಿಕೊಂಡಿದ್ದರು. ಇದನ್ನೂ ಓದಿ: ಫೇಸ್‍ಬುಕ್‍ನಲ್ಲಿ ಪರಿಚಯ- ಸ್ನೇಹಿತನಿಂದ ಅಪ್ರಾಪ್ತೆಯ ಅಪಹರಿಸಿ ಗ್ಯಾಂಗ್ ರೇಪ್

ಪಂಜಾಬ್ ಮೂಲದ ಜನಪ್ರಿಯ ಗಾಯಕನನ್ನು ಹತ್ಯೆ ಮಾಡಲು ಗ್ಯಾಂಗ್‌ಸ್ಟರ್ ಅರ್ಷದೀಪ್ ಸಿಂಗ್ ಕಡೆಯಿಂದ ಸುಪಾರಿ ಪಡೆದಿದ್ದ ಆರೋಪಿಗಳು ಕಳೆದ ತಿಂಗಳು ಬಟಿಂಡಾದಲ್ಲಿ ಗಾಯಕನ ಹತ್ಯೆ ವಿಫಲ ಯತ್ನ ಮಾಡಿದ್ದರು. ಮನೆಯಲ್ಲಿ ನಿರ್ದಿಷ್ಟ ಗುರಿ ಸಿಗದ ಕಾರಣ ಪ್ರಯತ್ನ ವಿಫಲವಾಗಿತ್ತು. ಆರೋಪಿಗಳು ದೆಹಲಿಯಲ್ಲಿರುವ ರಹಸ್ಯ ಮಾಹಿತಿ ಪಡೆದ ಪೊಲೀಸರು ಅವರನ್ನು ಬಂಧಿಸಲು ಮಯೂರ್ ವಿಹಾರ್ (Mayur Vihar) ಬಳಿ ತೆರಳಿದ್ದರು. ಇದನ್ನೂ ಓದಿ: ಮನೆ ಕ್ಲೀನ್‌ ಮಾಡು ಅಂತ ಹೇಳಿದ್ದಕ್ಕೆ ಜಗಳ – ಗಂಡನ ಕಿವಿ ಕಚ್ಚಿ ತುಂಡು ಮಾಡಿದ ಹೆಂಡ್ತಿ ವಿರುದ್ಧ ಕೇಸ್‌!

ಪೊಲೀಸರು ಬಂಧನಕ್ಕೆ ಆಗಮಿಸುತ್ತಿದ್ದಂತೆ ಆರೋಪಿಗಳು ಗುಂಡಿನ ದಾಳಿ ಆರಂಭಿಸಿದ್ದಾರೆ. ಗುಂಡಿನ ದಾಳಿ ವೇಳೆ ಆರೋಪಿಗಳು ಐದು ಸುತ್ತು ಗುಂಡು ಹಾರಿಸಿದ್ದು, ಎರಡು ಸುತ್ತು ಪೊಲೀಸರ ಬುಲೆಟ್ ಪ್ರೂಫ್ ಜಾಕೆಟ್‌ಗೆ ತಗುಲಿದೆ, ಆರೋಪಿಗಳ ಮೇಲೆ ಪೊಲೀಸ್‌ರ ತಂಡ ಆರು ಸುತ್ತು ಗುಂಡು ಹಾರಿಸಿ ಪ್ರತಿ ದಾಳಿ ಮಾಡಿದೆ. ಬಳಿಕ ಎನ್‌ಕೌಂಟರ್ (Encounter) ನಂತರ ಇಬ್ಬರನ್ನೂ ಅಕ್ಷರಧಾಮ ಮಂದಿರ ರಸ್ತೆಯ ಮಯೂರ್ ವಿಹಾರ್‌ನಲ್ಲಿರುವ ಸಮಾಚಾರ್ ಅಪಾರ್ಟ್ಮೆಂಟ್ ಬಳಿ ಬಂಧಿಸಲಾಯಿತು. ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯರ ಫೋಟೋ ಬಳಸಿಕೊಂಡು ಲಕ್ಷ ಲಕ್ಷ ದೋಚಿದ ಖದೀಮ

ಈ ಎನ್‌ಕೌಂಟರ್ ವೇಳೆ ಶಾರ್ಪ್ ಶೂಟರ್ ವೀರೇಂದ್ರ ಸಿಂಗ್ ಅವರ ಬಲಗಾಲಿಗೆ ಗುಂಡು ತಗುಲಿದೆ. ಇದರಿಂದಾಗಿ ಅವರು ಗಾಯಗೊಂಡಿದ್ದಾರೆ. ಎನ್‌ಕೌಂಟರ್ ನಂತರ ಇಬ್ಬರೂ ಆರೋಪಿಗಳನ್ನು ಎಲ್‌ಬಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಂದ ಒಂದು ರಿವಾಲ್ವರ್, 45 ಎಂಎಂ 06 ಸಜೀವ ಕಾಟ್ರಿಡ್ಜ್‌ಗಳು, ಇನ್ನೊಂದು ಪಿಸ್ತೋಲ್ 30 ಎಂಎಂ 07 ಸಜೀವ ಕಾಟ್ರಿಡ್ಜ್‌ಗಳು, ಮಾರಕಾಸ್ತ್ರಗಳು ಮತ್ತು ಕದ್ದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ವಿಶೇಷ ಪೊಲೀಸ್ ಆಯುಕ್ತ ಎಚ್‌ಜಿಎಸ್ ಧಲಿವಾಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಣಕ್ಕಾಗಿ ಪಾಕ್‍ಗೆ ಸೇನಾ ಮಾಹಿತಿ – ಇಬ್ಬರು ಶಂಕಿತರು ಅರೆಸ್ಟ್