ಕಣ್ಣೀರಿಟ್ಟ ಕಿಂಗ್‌ ಕೊಹ್ಲಿ – ಪ್ರೀತಿಯ ಅಪ್ಪುಗೆ ನೀಡಿ ಸಾಂತ್ವನ ಹೇಳಿದ ಅನುಷ್ಕಾ

ಅಹಮದಾಬಾದ್: ಭಾರತದ ಆತಿಥ್ಯದಲ್ಲಿ ಆಯೋಜನೆಗೊಂಡಿದ್ದ 2023ರ ಏಕದಿನ ವಿಶ್ವಕಪ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆದ್ರೆ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಸೋಲು ಭಾರತೀಯ ಅಭಿಮಾನಿಗಳಿಗೆ ಇಂದಿಗೂ ಅರಗಿಸಿಕೊಳ್ಳಲಾರದ ನೋವು ತರಿಸಿದೆ. ಟೀಂ ಇಂಡಿಯಾ (Team India) ಬೆಂಬಲಿಸಲು ಮೈದಾನದಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ಕೊನೆಯಲ್ಲಿ ಕಣ್ಣಲ್ಲಿ ನೀರು ತುಂಬಿಕೊಂಡು ಹೊರಟಿದ್ದನ್ನು ಮರೆಯುವಂತಿಲ್ಲ. ಈಗಲೂ ಅಭಿಮಾನಿಗಳು ಸೋಲಿನ ಕ್ಷಣಗಳನ್ನು ಮೆಲುಕುಹಾಕುತ್ತಿದ್ದಾರೆ.

ವಿಶ್ವಕಪ್ ಫೈನಲ್‌ನಲ್ಲಿ ಭಾರತ ಆಸೀಸ್ ಎದುರು ಸೋತ ನಂತರ ಟೀಂ ಇಂಡಿಯಾದ ಭಾವುಕ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡ್ತಿವೆ. ಚಿತ್ರರಂಗದ ಸೆಲಬ್ರಿಟಿಗಳು ಸೇರಿದಂತೆ ರಾಜಕೀಯ ನಾಯಕರು ಕೂಡ ಟೀಂ ಇಂಡಿಯಾ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲದರ ಮಧ್ಯೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರ ಭಾವುಕ ಫೋಟೋಗಳು ಅಭಿಮಾನಿಗಳನ್ನೂ ಭಾವುಕರಾಗುವಂತೆ ಮಾಡಿವೆ. ಇದನ್ನೂ ಓದಿ: ಇದೇ ಕೊನೆಯಲ್ಲ, ನಾವು ಕಪ್‌ ಗೆಲ್ಲೋವರೆಗೂ ಇದು ಮುಗಿಯಲ್ಲ – ಗಿಲ್‌ ಭಾವುಕ 

ವಿಶ್ವಕಪ್‌ನ ಪ್ರತಿ ಪಂದ್ಯಕ್ಕೂ ಹಾಜರಾಗುತ್ತಿದ್ದ ಅನುಷ್ಕಾ ಶರ್ಮಾ, ಕೊಹ್ಲಿ ಅವರಿಂದ ಸಿಡಿದ ಸಾಲು ಸಾಲು ದಾಖಲೆಗಳನ್ನ ಕಣ್ತುಂಬಿಕೊಂಡಿದ್ದರು. ಸ್ಟೇಡಿಯಂನಲ್ಲೇ ಕುಣಿದು ಕುಪ್ಪಳಿಸುತ್ತಾ ಕೊಹ್ಲಿಯನ್ನ ಉರಿದುಂಬಿಸುತ್ತಿದ್ದರು. ಅನುಷ್ಕಾ ಮತ್ತು ವಿರಾಟ್ (Anushka Virat) ಅವರ ಫೋಟೋ-ವೀಡಿಯೊಗಳು ಸಾಕಷ್ಟು ವೈರಲ್ ಆಗುತ್ತಿತ್ತು. ಆದ್ರೆ ವಿಶ್ವಕಪ್ ಸೋಲಿನಿಂದ ನಿರಾಸೆಯಾಗಿ ಬರುತ್ತಿದ್ದ ಕೊಹ್ಲಿಯನ್ನು ಅಪ್ಪಿಕೊಂಡು ಸಂತೈಸಿರುವ ದೃಶ್ಯ ಅಭಿಮಾನಿಗಳ ಕಣ್ಣಿಗೆ ಕಟ್ಟಿದಂತಾಗಿದೆ. ಇದನ್ನೂ ಓದಿ: ಅಪ್ಪಿಕೊಂಡು ಸಮಾಧಾನ ಹೇಳಿದ ಮೋದಿ – ಮತ್ತೆ ನಾವು ಪುಟಿದೇಳುತ್ತೇವೆ ಎಂದ ಶಮಿ 

ನವೆಂಬರ್ 19ರ ಸೂಪರ್ ಸಂಡೇ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತ ಕೆಲವೇ ಕ್ಷಣಗಳಲ್ಲಿ, ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿಗೆ ಸಮಾಧಾನ ಮಾಡುತ್ತಿರುವುದು ಕಂಡು ಬಂದಿದೆ. ಪಂದ್ಯ ಸೋತು ಕಣ್ಣಲ್ಲಿ ನೀರು ತುಂಬಿಕೊಂಡು ಬೇಸರದಲ್ಲಿದ್ದ ವಿರಾಟ್ ಕೊಹ್ಲಿ ಸ್ಟ್ಯಾಂಡ್ ಬಳಿ ಬರುತ್ತಿದ್ದಂತೆ ಅನುಷ್ಕಾ ಶರ್ಮಾ ಅವರನ್ನು ತಬ್ಬಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಸಹ ಪ್ರೀತಿಯ ಅಪ್ಪುಗೆ ನೀಡಿ ಸಮಾಧಾನ ಪಡಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಅಭಿಮಾನಿಗಳನ್ನೂ ಭಾವುಕರಾಗುವಂತೆ ಮಾಡಿದೆ.

ವಿಶ್ವಕಪ್ ಫೈನಲ್‌ನಲ್ಲಿ ಸೋಲು ಕಂಡರೂ ಕೂಡ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಭಾರತ ತಂಡವನ್ನು ಅಭಿನಂದಿಸಿದ್ದಾರೆ. ಬಾಲಿವುಡ್ ಸ್ಟಾರ್‌ಗಳಾದ ಸುನೀಲ್ ಶೆಟ್ಟಿ, ಶಾರುಖ್ ಖಾನ್, ದಿಯಾ ಮಿರ್ಜಾಸೋನಾಲಿ ಬೇಂದ್ರೆ, ದಿಯಾ ಮಿರ್ಜಾ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್, ಮೀರಾ ರಜಪೂತ್ ತಮ್ಮ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.