ಆಸೀಸ್‌ ಫಾರ್ಮ್‌ ಬಗ್ಗೆ ನೋ ಟೆನ್ಷನ್‌, ನಮ್ಮ ಶಕ್ತಿ ಏನೆಂಬುದು ನಾಳೆ ಗೊತ್ತಾಗುತ್ತೆ: ರೋಹಿತ್‌ ಶರ್ಮಾ

ಅಹಮದಾಬಾದ್‌: ನಾನು ನಾಯಕನಾದ ದಿನದಿಂದಲೇ ವಿಶ್ವಕಪ್‌ (World Cup 2023) ಟೂರ್ನಿಯ ಈ ದಿನಕ್ಕಾಗಿ ತಯಾರಿ ನಡೆಸುತ್ತಾ ಬಂದಿದ್ದೇವೆ. ಆಸೀಸ್‌ ತಂಡದ ಫಾರ್ಮ್‌ ಬಗ್ಗೆ ನಮಗೆ ಚಿಂತೆಯಿಲ್ಲ ನಮ್ಮ ಶಕ್ತಿ ಏನೆಂಬುದು ನಾಳೆ ಗೊತ್ತಾಗುತ್ತದೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಹೇಳಿದ್ದಾರೆ.

ಮ್ಯಾಚ್‌ನ ಪ್ರೀ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ರೋಹಿತ್‌, ನಾಯಕನಾದ ದಿನದಿಂದಲೇ ಈ ದಿನಕ್ಕಾಗಿ ತಯಾರಿ ನಡೆಸುತ್ತಾ ಬಂದಿದ್ದೇವೆ. ಕಳೆದ 2 ವರ್ಷಗಳಿಂದ ಆಟದ ಸ್ವರೂಪಗಳಿಗೆ ಅನುಗುಣವಾಗಿ ಆಟಗಾರರನ್ನು ಗುರುತಿಸಬೇಕಾಗಿತ್ತು. ನಾವು ಆಟಗಾರರಿಗೆ ಅವರ ಪಾತ್ರದ ಕುರಿತು ಸ್ಪಷ್ಟನೆ ನೀಡಬೇಕಿತ್ತು. ಈ ಕುರಿತು ನಾಯಕ ಮತ್ತು ಕೋಚ್ ನಡುವೆ ಸಾಕಷ್ಟು ಚರ್ಚೆಗಳನ್ನು ನಡೆಸಿದ್ದೇವೆ ಎಂದು ನಾಯಕ ಹೇಳಿದ್ದಾರೆ.

ಪ್ರತಿಯೊಬ್ಬರಿಗೂ ಅವರ ಪಾತ್ರವೇನು ಎಂಬುದರ ಸ್ಪಷ್ಟತೆ ಇರುವುದು ತುಂಬಾ ಮುಖ್ಯ. ಇಂತಹ ಹಂತ ತಲುಪುವಾಗ ಸ್ಪಷ್ಟತೆ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಮನಸ್ಥಿತಿ ಮತ್ತು ಪಾತ್ರಗಳನ್ನು ಸ್ಪಷ್ಟವಾಗಿ ಇರಿಸಿಕೊಳ್ಳಲು ನಮ್ಮಿಂದಾದ ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡಿದ್ದೇವೆ. ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿ ಸಾಗಿದೆ. ನಾಳೆಯೂ ಇದೇ ರೀತಿ ಇರುತ್ತದೆ ಎಂಬ ಭರವಸೆ ಇದೆ. ನನಗೆ ಹಿಂದಿನ ಗೆಲುವುಗಳಿಂದ ಪಂದ್ಯ ಗೆಲ್ಲುತ್ತೇವೆ ಎಂಬ ನಂಬಿಕೆಯಿಲ್ಲ, ಆ ದಿನ ಏನು ಮಾಡುತ್ತೇವೆ ಅನ್ನೋದು ಮುಖ್ಯ. ಆ ಬಗ್ಗೆ ನನಗೆ ಆತ್ಮವಿಶ್ವಾಸವಿದೆ. ಅದೇ ರೀತಿ ಸಮತೋಲನವನ್ನೂ ಕಾಯ್ದುಕೊಳ್ಳುತ್ತೇವೆ ಎಂದಿದ್ದಾರೆ.

ಇದೇ ವೇಳೆ ಅಶ್ವಿನ್‌ (Ashwin)  ಅವರು ಪ್ಲೇಯಿಂಗ್‌ 11 ನಲ್ಲಿ ಆಡುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿ, ಪ್ಲೇಯಿಂಗ್‌-11 ನಲ್ಲಿ ಯಾರನ್ನೂ ಕಣಕ್ಕಿಳಿಸಬೇಕು ಎಂಬುದನ್ನೂ ಇನ್ನೂ ನಿರ್ಧಾರ ಮಾಡಿಲ್ಲ. ಪಿಚ್‌ ಮೌಲ್ಯಮಾಪನ ಮಾಡಿ ನಂತರ ನಮ್ಮ ತಂಡವನ್ನು ನಿರ್ಧರಿಸುತ್ತೇವೆ. ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಹೇಳಿದ್ದಾರೆ. ಬಾರ್ಡರ್‌ ಗವಾಸ್ಕರ್‌ 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅಶ್ವಿನ್‌ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿದ್ದರು.

ಆಸೀಸ್‌ ಫಾರ್ಮ್‌ ಬಗ್ಗೆ ನೋ ಟೆನ್ಷನ್‌: ಆಸ್ಟ್ರೇಲಿಯಾ (Australia) ಆಡಿದ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದೆ. ಅವರೂ ಉತ್ತಮ ಕ್ರಿಕೆಟ್ ಆಡಿದ್ದಾರೆ. ಎರಡೂ ತಂಡಗಳು ಫೈನಲ್‌ಗೆ ಅರ್ಹವಾಗಿವೆ. ಆಸ್ಟ್ರೇಲಿಯಾ ಏನು ಮಾಡಬಹುದೆಂದು ನಮಗೆ ತಿಳಿದಿದೆ. ಆದ್ರೆ ನಾವು ಕೂಡ ಏನು ಮಾಡಬೇಕೆಂದು ನೋಡುತ್ತೇವೆ ಅವರು ಯಾವ ರೀತಿಯ ಫಾರ್ಮ್‌ನಲ್ಲಿದ್ದರೂ ನಮಗೆ ಚಿಂತೆಯಿಲ್ಲ ಎಂದು ರೋಹಿತ್‌ ಶರ್ಮಾ ಹೇಳಿದ್ದಾರೆ.

ಟೀಂ ಇಂಡಿಯಾ ಅಜೇಯ ಓಟ!

  • ಮ್ಯಾಚ್ 1: ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಗೆಲುವು
  • ಮ್ಯಾಚ್ 2: ಆಫ್ಘಾನಿಸ್ತಾನ ವಿರುದ್ಧ 8 ವಿಕೆಟ್ ಗೆಲುವು
  • ಮ್ಯಾಚ್ 3: ಪಾಕಿಸ್ತಾನ ವಿರುದ್ಧ 7 ವಿಕೆಟ್ ಗೆಲುವು
  • ಮ್ಯಾಚ್ 4: ಬಾಂಗ್ಲಾದೇಶದ ವಿರುದ್ಧ 7 ವಿಕೆಟ್ ಗೆಲುವು
  • ಮ್ಯಾಚ್ 5: ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಗೆಲುವು
  • ಮ್ಯಾಚ್ 6: ಇಂಗ್ಲೆಂಡ್ ವಿರುದ್ಧ 100 ರನ್ ಗೆಲುವು
  • ಮ್ಯಾಚ್ 7: ಶ್ರೀಲಂಕಾ ವಿರುದ್ಧ 302 ರನ್ ಗೆಲುವು
  • ಮ್ಯಾಚ್ 8: ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗೆಲುವು
  • ಮ್ಯಾಚ್ 9: ನೆದರ್ಲೆಂಡ್ ವಿರುದ್ಧ 160 ರನ್ ಗೆಲುವು
  • ಮ್ಯಾಚ್‌ 10: ನ್ಯೂಜಿಲೆಂಡ್‌ ವಿರುದ್ಧ 70 ರನ್‌ಗಳ ಗೆಲುವು