ಅಹಮದಾಬಾದ್‌ ಬೀದಿಯಲ್ಲಿದ್ದ ನಿರ್ಗತಿಕರಿಗೆ ಹಣ ಕೊಟ್ಟು ಸಹಾಯ ಮಾಡಿದ ಅಫ್ಘಾನ್‌ ಕ್ರಿಕೆಟಿಗ

ಹೈದರಾಬಾದ್: ಅಪ್ಘಾನಿಸ್ತಾನದ (Afghanistan) ಆರಂಭಿಕ ಬ್ಯಾಟರ್‌ ರಹಮಾನುಲ್ಲಾ ಗುರ್ಬಾಜ್‌ (Rahmanullah Gurbaz), ಅಹಮದಾಬಾದ್‌ನಲ್ಲಿ ಬೀದಿ ಬದಿಯಲ್ಲಿದ್ದ ನಿರ್ಗತಿಕರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅವರು ಆಡುವ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ ಗುರ್ಬಾಜ್ ಸಹಾಯ ಮಾಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದೆ.

ಅಹಮದಾಬಾದ್‌ನಲ್ಲಿ (Ahmedabad) ಬೆಳಗಿನ ಜಾವ 3 ಗಂಟೆಗೆ ಗುರ್ಬಾಜ್‌ ವಾಕ್‌ಗೆ ಹೊರಟಿರುತ್ತಾರೆ. ಈ ವೇಳೆ ಬೀದಿ ಬದಿಯಲ್ಲಿ ಮಲಗಿದ್ದ ನಿರ್ಗತಿಕರಿಗೆ ಹಣ ನೀಡಿದ್ದಾರೆ. ಈ ದೃಶ್ಯದ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

“ಈ ತಿಂಗಳ ಆರಂಭದಲ್ಲಿ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಹೆರಾತ್ ಭೂಕಂಪದ ಸಂತ್ರಸ್ತರಿಗೆ ಹಣವನ್ನು ಸಂಗ್ರಹಿಸಲು ದಣಿವರಿಯದೇ ಕೆಲಸ ಮಾಡಿದ್ದೀರಿ. ಅಲ್ಲದೇ ವಿದೇಶಿ ನೆಲದಲ್ಲಿ ಈ ದಯೆಯ ಕಾರ್ಯವನ್ನೂ ಮಾಡಿದ್ದೀರಿ. ನೀವು ನಮಗೆಲ್ಲರಿಗೂ ಸ್ಫೂರ್ತಿ. ದೇವರು ನಿಮ್ಮನ್ನು ಆಶೀರ್ವದಿಸಲಿ, ಜಾನಿ” ಎಂದು ಕೆಕೆಆರ್‌ ಬರೆದುಕೊಂಡಿದೆ.

ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಆಫ್ಘಾನಿಸ್ತಾನ 9 ರ ಪೈಕಿ 4 ಪಂದ್ಯಗಳಲ್ಲಿ ಜಯ ಗಳಿಸಿದೆ. ಹಾಲಿ ಚಾಂಪಿಯನ್‌ ಇಂಗ್ಲೆಂಡ್‌, ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿ ಗಮನ ಸೆಳೆದಿದೆ. ಸೆಮಿಫೈನಲ್‌ ಪ್ರವೇಶಿಸುವ ಹತ್ತಿರದಲ್ಲಿದ್ದ ತಂಡಕ್ಕೆ ಕೊನೆಯಲ್ಲಿ ಅವಕಾಶ ಕೈತಪ್ಪಿತು.