KEA ಅಕ್ರಮ; ಕಿಂಗ್‌ಪಿನ್ ಆರ್.ಡಿ.ಪಾಟೀಲ್‌ಗೆ ಫ್ಲ್ಯಾಟ್‌ ಬಾಡಿಗೆಗೆ ನೀಡಿದ್ದ ಮಾಲೀಕ ಸೇರಿ ಮೂವರು ಅರೆಸ್ಟ್

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ್ದ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಕಿಂಗ್‌ಪಿನ್ ಆರ್.ಡಿ. ಪಾಟೀಲ್‌ಗೆ (R.D.Patil) ಬಾಡಿಗೆ ನೀಡಿದ್ದ ಅಪಾರ್ಟ್ಮೆಂಟ್ ಮಾಲೀಕ, ಮ್ಯಾನೇಜರ್ ಹಾಗೂ ಪಾಟೀಲ್ ಸಹಚರನನ್ನು ಅರೆಸ್ಟ್ ಮಾಡಲಾಗಿದೆ. ನಗರದ ವರ್ಧಾ ಲೇಔಟ್‌ನಲ್ಲಿರುವ ಮಹಾಲಕ್ಷ್ಮಿ ಅಪಾರ್ಟ್ಮೆಂಟ್ ಮಾಲೀಕ ಶಂಕರಗೌಡ ಪಾಟೀಲ್, ಮ್ಯಾನೇಜರ್ ದಿಲೀಪ್ ಕುಮಾರ್ ಹಾಗೂ ನೆಲೋಗಿ ಗ್ರಾಮದ ಶಿವಕುಮಾರ್ ಬಂಧಿತರು. ಇದನ್ನೂ ಓದಿ: ಇಲ್ಲೇ ಇದ್ದು ಉತ್ತರ ಪ್ರದೇಶದ ಮೊಬೈಲ್ ಲೊಕೇಶನ್ – ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಆರ್.ಡಿ ಪಾಟೀಲ್

ಆರ್.ಡಿ.ಪಾಟೀಲ್ ಬಗ್ಗೆ ಮಾಧ್ಯಮಗಳಲ್ಲಿ ಇಷ್ಟೊಂದು ಚರ್ಚೆ ನಡೆಯುತ್ತಿದ್ದರೂ ಮನೆ ನೀಡಿದ ಆರೋಪ ಮತ್ತು ಪೊಲೀಸರಿಗೆ ಮಾಹಿತಿ ನೀಡದೇ ಕಿಂಗ್‌ಪಿನ್ ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್ ಮಾಲೀಕ ಮತ್ತು ಮ್ಯಾನೇಜರ್‌ನನ್ನು ಬಂಧಿಸಲಾಗಿದೆ.

ಆರ್.ಡಿ.ಪಾಟೀಲ್‌ನಿಂದ 10 ಸಾವಿರ ರೂ. ಅಡ್ವಾನ್ಸ್ ಪಡೆದು ಅಪಾರ್ಟ್ಮೆಂಟ್ ಬಾಡಿಗೆಗೆ ನೀಡಲಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಪೊಲೀಸರ ಆಗಮನ ಮಾಹಿತಿ ತಿಳಿದು ಆರ್.ಡಿ.ಪಾಟೀಲ್ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಕೆಇಎ ಪರೀಕ್ಷೆ ಅಕ್ರಮ ಪ್ರಕರಣ – ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಕಾಂಪೌಂಡ್ ಹಾರಿ ಎಸ್ಕೇಪ್

ಸಹಚರ ಶಿವಕುಮಾರ್‌ನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಆರ್.ಡಿ.ಪಾಟೀಲ್ ಎಸ್ಕೇಪ್ ಆದ ಬಳಿಕ ಆತನ ಜೊತೆ ಶಿವಕುಮಾರ್ ಸಂಪರ್ಕದಲ್ಲಿದ್ದ. ಆರೋಪಿಯ ಕಾಲ್ ಹಿಸ್ಟರಿಯಲ್ಲಿ ಶಿವಕುಮಾರ್ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.