ಹರಿಯಾಣದಲ್ಲಿ ಮುಂದುವರಿದ ಘರ್ಷಣೆ; 116 ಮಂದಿ ಅರೆಸ್ಟ್‌ – ದೆಹಲಿಯಲ್ಲಿ ಅಲರ್ಟ್‌

ಚಂಡೀಗಢ: ಹರಿಯಾಣದ (Haryana Violence) ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್‌ (VHP) ನಡೆಸಿದ ಧಾರ್ಮಿಕ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಶಮನವಾಗುವ ಸೂಚನೆ ಕಾಣುತ್ತಿಲ್ಲ. ಸಂಘರ್ಷ ಉಲ್ಬಣಗೊಳ್ಳುತ್ತಿದ್ದು, ಮಂಗಳವಾರ ತಡರಾತ್ರಿವರೆಗೂ ಪೊಲೀಸರು 116 ಮಂದಿಯನ್ನು ಬಂಧಿಸಿದ್ದಾರೆ. ಇಲ್ಲಿವರೆಗೂ ಸುಮಾರು 54 ಎಫ್‌ಐಆರ್‌ಗಳು ದಾಖಲಾಗಿವೆ. ಕೋಮು ಘರ್ಷಣೆಯಲ್ಲಿ ಒಟ್ಟು 6 ಮಂದಿ ಸಾವಿಗೀಡಾಗಿದ್ದಾರೆ.

ಗುರುಗ್ರಾಮ್‌ನಲ್ಲಿ ಹಿಂಸಾಚಾರ ಹೆಚ್ಚಾಗಿದ್ದು, ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಗುರುಗ್ರಾಮ ಸೇರಿದಂತೆ ಸುತ್ತಮುತ್ತ ಭಾಗದಲ್ಲಿ 144 ಸೆಕ್ಷನ್‌ ಜಾರಿಗೊಳಿಸಲಾಗಿದೆ. ಇಂದು ಸಹ ಇಂಟರ್‌ನೆಟ್‌ ಸೌಲಭ್ಯ ಕಡಿತ ಮಾಡಲಾಗಿದೆ. ಪೊಲೀಸ್‌ ಮತ್ತು ಕೇಂದ್ರ ಭದ್ರತಾ ಪಡೆಯಿಂದ ಪರೇಡ್‌ ನಡೆಸಲಾಗಿದೆ. ಇದನ್ನೂ ಓದಿ: ಹರಿಯಾಣದಲ್ಲಿ ಕೋಮು ಸಂಘರ್ಷ: ಸಾವಿನ ಸಂಖ್ಯೆ 5ಕ್ಕೆ ಏರಿಕೆ, 70 ಮಂದಿಗೆ ಗಾಯ, ಅಂಗಡಿ-ಮುಂಗಟ್ಟುಗಳಿಗೆ ಬೆಂಕಿ

ನುಹ್ ಘರ್ಷಣೆಯನ್ನು ವಿರೋಧಿಸಿ ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳ ಯೋಜಿಸಿರುವ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮೇವಾತ್ ಪ್ರದೇಶದಲ್ಲಿ ನಡೆಯುತ್ತಿರುವ ಘರ್ಷಣೆಗಳ ವಿರುದ್ಧ ವಿಎಚ್‌ಪಿ ಇಂದು ಪ್ರತಿಭಟನೆಗೆ ಕರೆ ನೀಡಿದೆ. ವಿಎಚ್‌ಪಿ ಮತ್ತು ಬಜರಂಗದಳ ಬುಧವಾರ ಸಂಜೆ 4 ಗಂಟೆಗೆ ಮನೇಸರ್‌ನ ಭೀಸಂ ದಾಸ್ ಮಂದಿರದಲ್ಲಿ ಮಹಾಪಂಚಾಯತ್‌ಗೆ ಕರೆ ನೀಡಿದೆ.

ನುಹ್‌ನಲ್ಲಿ ಘರ್ಷಣೆಯಾದ ಒಂದು ದಿನದ ನಂತರ ಮಂಗಳವಾರ ಗುಂಪೊಂದು ಗುರುಗ್ರಾಮ್‌ನ ಬಾದ್‌ಶಾಹ್‌ಪುರದಲ್ಲಿ ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚಿತು. ಅಂಗಡಿಗಳನ್ನು ಧ್ವಂಸಗೊಳಿಸಿತು. ಗುಂಪು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಅಂಗಡಿಗಳನ್ನು ಧ್ವಂಸಗೊಳಿಸಿತು. ಪ್ರದೇಶದ ಮಸೀದಿಯ ಮುಂದೆ “ಜೈ ಶ್ರೀ ರಾಮ್” ಎಂದು ಘೋಷಣೆಗಳನ್ನು ಕೂಗಲಾಯಿತು. ಹಿಂಸಾಚಾರದ ನಂತರ ಬಾದಶಹಪುರ ಮಾರುಕಟ್ಟೆಯನ್ನು ಮುಚ್ಚಲಾಯಿತು. ಇದನ್ನೂ ಓದಿ: ಹರಿಯಾಣದಲ್ಲಿ ನಿಲ್ಲದ ಕೋಮು ಘರ್ಷಣೆ – ನಾಲ್ವರು ಸಾವು; 30 ಕ್ಕೂ ಹೆಚ್ಚು ಮಂದಿಗೆ ಗಾಯ

ಮಂಗಳವಾರ ರಾತ್ರಿ ಗುರುಗ್ರಾಮ್‌ನಲ್ಲಿ ನಡೆದ ಹಿಂಸಾಚಾರದಿಂದಾಗಿ ದೆಹಲಿ ಅಲರ್ಟ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿನ ವರದಿಗಳಿಗೆ ಕಿವಿಗೊಡಬೇಡಿ, ತುರ್ತು ಸಂದರ್ಭದಲ್ಲಿ 112 ಕ್ಕೆ ಕರೆ ಮಾಡಿ ಎಂದು ಗುರುಗ್ರಾಮ್ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]