ದಂಗೆ ನಿಲ್ಲಿಸಿ ನಗರ ತೊರೆದ ವ್ಯಾಗ್ನರ್ ಪಡೆ – ಟಾ ಟಾ.. ಬೈ ಬೈ ಹೇಳಿದ ರಷ್ಯನ್ನರು

ಮಾಸ್ಕೋ: ಯೆವ್ಗೆನಿ ಪ್ರಿಗೋಜಿನ್ (Yevgeny Prigozhin) ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ (Wagner) ರಷ್ಯಾ (Russia) ಮೇಲೆ ದಂಗೆ ಏಳಲು ನಿರ್ಧರಿಸಿತ್ತು. ಆದರೆ ಬೆಲಾರಸ್ ಅಧ್ಯಕ್ಷ ಲೂಕಶೆಂಕೋ ಮಧ್ಯಸ್ತಿಕೆಯ ಪರಿಣಾಮ ಹೋರಾಟವನ್ನು ವ್ಯಾಗ್ನರ್ ಮುಖ್ಯಸ್ಥ ಪ್ರಿಗೋಜಿನ್ ಕೈಬಿಟ್ಟಿದ್ದಾರೆ. ವ್ಯಾಗ್ನರ್ ಪಡೆಗಳು ದಕ್ಷಿಣ ರಷ್ಯಾದ ರೋಸ್ಟೋವ್ ಆನ್ ಡಾನ್ ಅನ್ನು ತೊರೆಯುತ್ತಿದ್ದ ವೇಳೆ ನಗರವಾಸಿಗಳು ಅವರತ್ತ ಕೈ ಬೀಸಿ ಸಂಭ್ರಮಿಸಿದ್ದಾರೆ.

ಉಕ್ರೇನ್ (Ukraine) ವಿರುದ್ಧ ದಾಳಿ ನಡೆಸುತ್ತಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಪ್ತನೇ ರಷ್ಯಾ ಸೇನೆ ವಿರುದ್ಧ ಬಂಡಾಯ ಎದ್ದಿದ್ದ. ಯೆವ್ಗೆನಿ ಪ್ರಿಗೋಜಿನ್ ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ ರಷ್ಯಾ ಪಡೆಗಳ ವಿರುದ್ಧ ತಿರುಗಿಬಿದ್ದು ದಾಳಿಗೆ ಮುಂದಾಗಿತ್ತು.

ವ್ಯಾಗ್ನರ್ ಸೇನೆ ಮೊದಲು ರೋಸ್ಟೋವ್ ನಗರವನ್ನು ವಶಪಡಿಸಿಕೊಂಡಿತ್ತು. ಬಳಿಕ ಮಾಸ್ಕೋದ ಹೆಚ್ಚಿನ ಭಾಗವನ್ನು ಆಕ್ರಮಿಸಿ ಮುಂದುವರಿದಿತ್ತು. ಹೆಚ್ಚಿನ ಅನಾಹುತ ತಪ್ಪಿಸಲು ಮಧ್ಯಪ್ರವೇಶಿಸಿದ ಬೆಲಾರಸ್ ಅಧ್ಯಕ್ಷ ಮಾತುಕತೆ ಮೂಲಕ ದಂಗೆ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ರಷ್ಯಾ ದಂಗೆ ಮಾತುಕತೆ ಮೂಲಕ ದಮನ – ಬೆಲಾರಸ್ ಅಧ್ಯಕ್ಷ ಮಧ್ಯಸ್ತಿಕೆಯಿಂದ ಮಾರ್ಗ ಮಧ್ಯೆಯೇ ಹೋರಾಟ ಕೈಬಿಟ್ಟ ಪ್ರಿಗೋಜಿನ್

ಇದೀಗ ಮಾಸ್ಕೋ ಸಮೀಪ ಬಂದಿದ್ದ ವ್ಯಾಗ್ನರ್‌ಗಳಿಗೆ ವಾಪಸಾಗುವಂತೆ ಸೂಚಿಸಲಾಗಿದೆ. ಅದರಂತೆ ವ್ಯಾಗ್ನರ್ ಪಡೆಗಳು ನಗರವನ್ನು ತೊರೆಯುವ ಸಂದರ್ಭ ರಷ್ಯನ್ನರು ಸಂಭ್ರಮಾಚರಣೆ ಮಾಡಿದ್ದಾರೆ. ಅಲ್ಲದೇ ಹೊರಟಿದ್ದ ಖಾಸಗಿ ಸೇನೆಗೆ ಟಾ ಟಾ.. ಬೈ ಬೈ ಹೇಳಿದ್ದಾರೆ. ಈ ದೃಶ್ಯದ ವೀಡಿಯೋ ವೈರಲ್ ಆಗಿದೆ.

ವ್ಯಾಗ್ನರ್ ಗುಂಪು ಟೆಲಿಗ್ರಾಂನಲ್ಲಿ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಶಸ್ತ್ರಸಜ್ಜಿತ ವಾಹನಗಳು ಹಾಗೂ ಟ್ಯಾಂಕರ್‌ಗಳು ಪಟ್ಟಣವನ್ನು ತೊರೆಯುವ ದೃಶ್ಯವಿದೆ. ಈ ವೇಳೆ ಹತ್ತಾರು ಜನರು ವ್ಯಾಗ್ನರ್.. ವ್ಯಾಗ್ನರ್.. ಎಂದು ಘೋಷಣೆ ಕೂಗಿದ್ದಾರೆ. ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಅವರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಈ ವೇಳೆ ಜನರು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಟೇಕ್‍ಆಫ್ ವೇಳೆ ವಿಮಾನದ ಟಯರ್ ಬ್ಲಾಸ್ಟ್ – ಸಿಬ್ಬಂದಿ ಸೇರಿ 11 ಜನರಿಗೆ ಗಾಯ