ಯುವಕರ ಮೈಂಡ್‍ವಾಶ್ ಮಾಡಿ ಭಯೋತ್ಪಾದನೆಗೆ ನೂಕುತಿದ್ದ ಪಿಎಫ್‍ಐ ಮುಖಂಡ ಬಳ್ಳಾರಿಯಲ್ಲಿ ಅರೆಸ್ಟ್

ಬಳ್ಳಾರಿ: ಯುವಕರನ್ನು ಮೈಂಡ್‍ವಾಶ್ ಮಾಡಿ ಭಯೋತ್ಪಾದನೆಗೆ ನೂಕುತ್ತಿದ್ದ ಪಿಎಫ್‍ಐ (PFI) ಮುಖಂಡನನ್ನು ಎನ್‍ಐಎ (NIA) ಬಳ್ಳಾರಿಯ (Ballari) ಕೌಲ್ ಬಜಾರ್‌ನಲ್ಲಿ ಬುಧವಾರ ಬಂಧಿಸಿದೆ.

ಬಂಧಿತ ಆರೋಪಿಯನ್ನು ಆಂಧ್ರ ಮೂಲದ ನಾಸ್ಸಮ್ ಮೊಹಮ್ಮದ್ ಯೂನಸ್ (33) ಎಂದು ತಿಳಿದು ಬಂದಿದೆ. ಈತ 4 ತಿಂಗಳಿಂದ ಪ್ಲಂಬರ್ ಆಗಿ ಕೆಲಸ ಮಾಡಿಕೊಂಡು ಬಳ್ಳಾರಿಯಲ್ಲಿ ತಲೆ ಮರೆಸಿಕೊಂಡಿದ್ದ. ನಿಜಾಮಾಬಾದ್ ಭಯೋತ್ಪಾದಕ ದಾಳಿ ಸಂಚು ಪ್ರಕರಣದಲ್ಲಿ ಆರೋಪಿ ಶಾಮೀಲಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಅಭಿಪ್ರಾಯ ತಿಳಿಸಿ: ಸಾರ್ವಜನಿಕರಿಗೆ ಕೇಂದ್ರ ಕಾನೂನು ಆಯೋಗ ಮನವಿ

ಈತ ನಿಷೇಧಿತ ಸಂಘಟನೆ ಪಿಎಫ್‍ಐಯ ಪ್ರಮುಖ ಶಸ್ತ್ರಾಸ್ತ್ರ ತರಬೇತುದಾರನಾಗಿದ್ದ. ಆಂಧ್ರಪ್ರದೇಶದ ನಂದ್ಯಾಲ್‍ನವನಾದ ಯೂನುಸ್ ಸಹೋದರನ ಜೊತೆ ಇನ್‍ವರ್ಟರ್ ವ್ಯಾಪಾರದಲ್ಲಿ ತೊಡಗಿಕೊಂಡಿದ್ದನು. ಆದರೆ 2022ರ ಸೆಪ್ಟೆಂಬರ್‍ನಲ್ಲಿ ತನಿಖಾ ಸಂಸ್ಥೆ ಈತನ ಮನೆಯನ್ನು ಶೋಧಿಸಿದ ಬಳಿಕ ತಲೆಮರೆಸಿಕೊಂಡಿದ್ದ. ಬಳಿಕ ಈತ ಗುರುತನ್ನು ಮರೆಸಿಕೊಂಡು ಬಶೀರ್ ಎಂಬ ಹೆಸರಿನಲ್ಲಿ ಬಳ್ಳಾರಿಯ ಕೌಲ್ ಬಜಾರ್‌ನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತೆಲಂಗಾಣದಲ್ಲಿ ಪಿಎಫ್‍ಐ ಮುಖಂಡರು ಮತ್ತು ಕಾರ್ಯಕರ್ತ ಯುವಕರನ್ನು ಸಂಘಟನೆಗೆ ಸೇರಿಸಿಕೊಂಡು ಭಯೋತ್ಪಾದನಾ ಕೃತ್ಯಗಳನ್ನೆಸಗಲು ತರಬೇತಿ ನೀಡುತ್ತಿದ್ದ. ಅಲ್ಲದೇ ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತರಬೇತಿ ಯೋಜನೆ ರೂಪಿಸಿದ್ದ. ಈತ ಎರಡು ರಾಜ್ಯಗಳಿಗೆ ಪಿಎಫ್‍ಐಯ ದೈಹಿಕ ತರಬೇತಿಯ ರಾಜ್ಯ ಸಂಯೋಜಕನಾಗಿದ್ದ ಎಂದು ಎನ್‍ಐಎ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹೆಚ್.ಡಿ.ದೇವೇಗೌಡರ ಭೇಟಿಯಾದ ತೇಜಸ್ವಿ ಸೂರ್ಯ