ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?

ಲಕ್ನೋ: ಸೋಮವಾರ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದ ಬಳಿಕ ವಿರಾಟ್ ಕೊಹ್ಲಿ (Virat Kohli) ಮತ್ತು ಗೌತಮ್ ಗಂಭೀರ್ ಅವರಿಗೆ ತಮ್ಮ ಐಪಿಎಲ್ (IPL) ಪಂದ್ಯದ ಶೇ.100 ರಷ್ಟು ದಂಡ ವಿಧಿಸಲಾಗಿದೆ.

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅತಿರೇಖದ ವರ್ತನೆಯಿಂದ ಐಪಿಎಲ್ ನೀತಿ ಸಂಹಿತೆ (IPL Code of Conduct) ಉಲ್ಲಂಘಿಸಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ (25 ಲಕ್ಷ ರೂ.) ಹಾಗೂ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ 100 ಪ್ರತಿಶತದಷ್ಟು (1.07 ಕೋಟಿ ರೂ.) ದಂಡ ವಿಧಿಸಲಾಗಿದೆ. ಐಪಿಎಲ್ ನೀತಿಸಂಹಿತೆಯ ಆರ್ಟಿಕಲ್ 2.21ರ ಅಡಿಯಲ್ಲಿ ಗೌತಮ್ ಗಂಭೀರ್ 2ನೇ ಹಂತದ ಅಪರಾಧ ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದೆ. ಈ ನಡುವೆ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನವೀನ್-ಉಲ್-ಹಕ್‌ಗೆ (Naveen-ul-Haq) ಶೇ.50 ರಷ್ಟು(1.79 ಲಕ್ಷ ರೂ.) ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಒಂದು ಹುಡ್ಗನ್ನ ಪಟಾಯಿಸಿಕೊಡು ವಿರಾಟ್‌ – ಪೋಸ್ಟರ್‌ ಹಿಡಿದು ರಿಕ್ವೆಸ್ಟ್‌ ಮಾಡಿದ RCB ಫ್ಯಾನ್ಸ್‌

ಏನಿದು ಕೊಹ್ಲಿ-ಗಂಭೀರ್ ವಾರ್?
ಏಕನಾ ಕ್ರೀಡಾಂಗಣದಲ್ಲಿ ನಡೆದ 43ನೇ ಪಂದ್ಯದಲ್ಲಿ ಆರ್‌ಸಿಬಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್‌ಗಳ ಜಯ ಸಾಧಿಸಿತು. ಈ ಹಿಂದೆ ಆರ್‌ಸಿಬಿ ತವರಿನಲ್ಲಿ ಲಕ್ನೋ ವಿರುದ್ಧದ ವಿರೋಚಿತ ಸೋಲಿಗೆ ಸೇಡು ತೀರಿಸಿಕೊಂಡಿತು. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಈ ಹಿಂದೆಯೂ ಹಲವು ಬಾರಿ ಜಗಳ ನಡೆದಿವೆ. ಆ ನಂತರ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಆದರೆ ಸೋಮವಾರ ನಡೆದ ಪಂದ್ಯದ ಬಳಿಕ ಇವರಿಬ್ಬರ ನಡುವಿನ ಜಗಳ ಅತಿರೇಕಕ್ಕೆ ತಲುಪಿತ್ತು. ಒಂದು ವೇಳೆ ಸಹ ಆಟಗಾರರು ಮಧ್ಯ ಬಾರದೇ ಇದ್ದಿದ್ದರೆ ಕೈಕೈ ಮಿಲಾಯಿಸುವುದಕ್ಕೂ ಕಾರಣವಾಗುತ್ತಿತ್ತು. ಇದನ್ನೂ ಓದಿ: ಬೊಂಬಾಟ್‌ ಬೌಲಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – RCBಗೆ 18 ರನ್‌ಗಳ ಭರ್ಜರಿ ಜಯ

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಣ ಪಂದ್ಯದಲ್ಲಿ ಲಕ್ನೋ ತಂಡ 1 ವಿಕೆಟ್‌ಗಳ ಜಯ ದಾಖಲಿಸಿತ್ತು. ಆ ಪಂದ್ಯದ ಬಳಿಕ ಗಂಭೀರ್ ಬಾಯ್ಮೇಲೆ ಬೆರೆಳಿಟ್ಟು ಆರ್‌ಸಿಬಿ ಪ್ರೇಕ್ಷಕರು ಸುಮ್ಮನಿರುವಂತೆ ಸೂಚಿಸಿ ಸಂಭ್ರಮಿಸಿದ್ದರು. ಲಕ್ನೋ ತಂಡದ ಅವೇಶ್ ಖಾನ್ ಹೆಲ್ಮೆಟ್ ಕಿತ್ತೆಸೆದು ಅತಿರೇಖದ ವರ್ತನೆ ತೋರಿಸಿದ್ದರು. ಇದಕ್ಕೆ ಪ್ರತಿಯಾಗಿ ತವರಿನಲ್ಲಿ ಬುದ್ಧಿ ಕಲಿಸಲು ನಿರ್ಧರಿಸಿದ್ದ ಆರ್‌ಸಿಬಿ ತಂಡ ಕೊನೆಗೂ ಗೆದ್ದು ಬೀಗಿತು. ಪಂದ್ಯದ ನಡುವೆ ವಿರಾಟ್ ಅಭಿಮಾನಿಗಳು ಸುಮ್ಮನಿರಬಾರದು ?ಹೃದಯತುಂಬಿ ಸಂಭ್ರಮಿಸಬೇಕು’ ಎಂದು ಸನ್ನೆ ಮೂಲಕ ತೋರಿಸಿದರು.

127 ರನ್ ಗುರಿ ಬೆನ್ನತ್ತಿದ ಲಕ್ನೋ ತಂಡ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನಿಂಗ್ಸ್ ಅಂತ್ಯದಲ್ಲಿ ಅಮಿತ್ ಮಿಶ್ರಾ 19 ರನ್ ಮತ್ತು ವೇಗಿ ನವೀನ್ ಉಲ್ ಹಕ್ 13 ನಡುವೆ ಸಣ್ಣ ಜೊತೆಯಾಟವೊಂದು ಮೂಡಿಬಂದಿತ್ತು. ಕವರ್ಸ್ ವಿಭಾಗದಲ್ಲಿ ಒಂದು ಫೋರ್ ಕೂಡ ಬಾರಿಸಿದ್ದ ನವೀನ್ ಆರ್‌ಸಿಬಿ ತಾರೆ ವಿರಾಟ್ ಕೊಹ್ಲಿ ಅವರನ್ನ ದುರುಗುಟ್ಟಿ ನೋಡಿ, ದೊಡ್ಡ ಜಗಳಕ್ಕೆ ಸಣ್ಣ ಕಿಡಿ ಹಚ್ಚಿದ್ದರು. ಪಂದ್ಯ ಮುಗಿದ ಬಳಿಕ ನವೀನ್ ಮತ್ತು ಕೊಹ್ಲಿ ಕೈ ಕುಲುಕುವಾಗಲೂ ಮಾತಿನ ಚಕಮಕಿ ನಡೆದಿತ್ತು. ಕೈ-ಕೈ ಮಿಲಾಯಿಸುವುದಕ್ಕೂ ಮುಂದಾಗಿದ್ದರು. ಆದ್ರೆ ಮ್ಯಾಕ್ಸ್ವೆಲ್ ಹಾಗೂ ಹರ್ಷಲ್ ಪಟೇಲ್ ಸಮಾಧಾನಪಡಿಸಿ ಕಳುಹಿಸಿದ್ದರು.

ಕೊಹ್ಲಿ ಮತ್ತು ನವೀನ್ ನಡುವಣ ಸಣ್ಣ ಜಗಳವನ್ನು ಅಲ್ಲೇ ಇದ್ದ ಎರಡೂ ತಂಡಗಳ ಆಟಗಾರರು ಬಗೆ ಹರಿಸಿದ್ದರು. ಆದರೆ, ಡಗೌಟ್‌ನಿಂದ ಹೊರಬಂದ ಗೌತಮ್ ಗಂಭೀರ್ ಜಗಳವನ್ನು ಮತ್ತಷ್ಟು ಗಂಭೀರವಾಗಿಸಿದರು. ವಿರಾಟ್ ಜೊತೆಗೆ ಮಾತನಾಡುತ್ತಿದ್ದ ಎಲ್‌ಎಸ್‌ಜಿ ಆಟಗಾರ ಕೈಲ್ ಮೇಯರ್ಸ್ ಅವರನ್ನು ಎಳೆದೊಯ್ದ ಗಂಭೀರ್ ಈ ಸಂದರ್ಭದಲ್ಲಿ ಮಾತಿನ ಚಕಮಕಿಯೇ ನಡೆಸಿದರು. ಕೊಹ್ಲಿ ಮತ್ತು ಗಂಭೀರ್‌ನ ತಡೆದು ನಿಲ್ಲಿಸಲು ಎರಡೂ ತಂಡದ ಆಟಗಾರರು ಹರಸಾಹನ ನಡೆಸಿದರು. ಈ ವೇಳೆ ಕೆ.ಎಲ್ ರಾಹುಲ್ ಹಾಗೂ ಅಮಿತ್ ಮಿಶ್ರಾ ಪರಿಸ್ಥಿತಿಯನ್ನು ತಣ್ಣಗಾಗಿಸಿದರು.

ಕೊಹ್ಲಿ-ಗಂಭೀರ್ ಜಗಳಕ್ಕೆ ಕಾರಣವೇನು?
ಕಳೆದ ಏಪ್ರಿಲ್ 10ರಂದು ಬೆಂಗಳೂರಿನಲ್ಲಿ ನಡೆದಿದ್ದ ಆರ್‌ಸಿಬಿ ಹಾಗೂ ಲಕ್ನೋ ನಡುವಣ ಪಂದ್ಯದಲ್ಲಿ ಲಕ್ನೋ ಆಟಗಾರರು ಅತಿರೇಕದ ವರ್ತನೆ ತೋರಿದ್ದರು. ಕೊನೆಯ ಎಸೆತದಲ್ಲಿ ಗೆಲುವು ಪಡೆದ ಬಳಿಕ ಅವೇಶ್ ಖಾನ್ ತಮ್ಮ ಹೆಲ್ಮೆಟ್ ಅನ್ನು ನೆಲಕ್ಕೆ ಜೋರಾಗಿ ಎಸೆದು ಸಂಭ್ರಮಿಸಿದ್ದರು. ಅಷ್ಟೇ ಅಲ್ಲದೆ, ಲಕ್ನೋ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ತಮ್ಮ ಕೈ ಸನ್ನೆಯ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಸೈಲೆನ್ಸ್ ಎಂದು ಹೇಳಿದ್ದರು. ಈ ಎಲ್ಲಾ ಘಟನೆಗಳನ್ನು ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ಆಟಗಾರರು ಗಮನಿಸಿದ್ದರು ಮತ್ತು ಲಕ್ನೋ ಆಟಗಾರರ ಈ ವರ್ತನೆ ಬಗ್ಗೆ ಅಸಮಾಧಾನಗೊಂಡಿದ್ದರು. ಸೋಮವಾರ ಪಂದ್ಯ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ಕೂಡ ಕೈ ಸನ್ನೆ ಮೂಲಕ ಗಂಭೀರ್‌ಗೆ ತಿರುಗೇಟು ನೀಡಿದರು.

ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ 19.5 ಓವರ್‌ಗಳಲ್ಲಿ 108 ರನ್ ಗಳಿಗೆ ಸರ್ವಪತನ ಕಂಡು ತವರಿನಲ್ಲಿ ಸೋತು ಮುಖಭಂಗ ಅನುಭವಿಸಿತು.