ಇಸ್ರೋ ಸಾಧನೆ – ಮರುಬಳಕೆ ಮಾಡಬಹುದಾದ ರಾಕೆಟ್ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ

ಚಿತ್ರದುರ್ಗ/ನವದೆಹಲಿ: ಉಪಗ್ರಹವನ್ನು ಕಕ್ಷೆಗೆ ಸೇರಿಸಿ ಮರಳಿ ಭೂಮಿಗೆ ಲ್ಯಾಂಡ್ ಆಗುವ ರಾಕೆಟ್ (Rocket) ಅಭಿವೃದ್ಧಿ ಪಡಿಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಹತ್ವದ ಸಾಧನೆ ಮಾಡಿದೆ.

ಭಾನುವಾರ ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ (ATR) ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ (RLV) ಲ್ಯಾಂಡಿಂಗ್ ಪರೀಕ್ಷೆ  ಯಶಸ್ವಿಯಾಗಿ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ, ಭಾರತ ಪ್ರಮುಖವಾದ ಮತ್ತೊಂದು ಸಾಧನೆಯನ್ನು ಮಾಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಜೊತೆಗೂಡಿ ಏಪ್ರಿಲ್ 2 ರಂದು ಮುಂಜಾನೆ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ ಆಟಾನಮಸ್ ಲ್ಯಾಂಡಿಂಗ್ ಮಿಷನ್ (RLV LVX) ಅನ್ನು ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದೆ.

ಪರೀಕ್ಷೆ ಹೇಗಾಯ್ತು?
ಭಾರತೀಯ ವಾಯುಪಡೆ ಚಿನೂಕ್ ಹೆಲಿಕಾಪ್ಟರ್ ಆರ್‌ಎಲ್‌ವಿ ಎತ್ತಿಕೊಂಡು ಬೆಳಗ್ಗೆ 7:10ರ ವೇಳೆಗೆ ಟೇಕ್ ಆಫ್ ಆಗಿದೆ. 4.5 ಕಿ.ಮೀ ಎತ್ತರದಲ್ಲಿ ಹೆಲಿಕಾಪ್ಟರ್ ಆರ್‌ಎಲ್‌ವಿಯನ್ನು ಬಿಡುಗಡೆ ಮಾಡಿದೆ. ಇಂಟಿಗ್ರೇಟೆಡ್ ನ್ಯಾವಿಗೇಷನ್, ಗೈಡೆನ್ಸ್ ಹಾಗೂ ಕಂಟ್ರೋಲ್ ಸಿಸ್ಟಮ್ ಅನ್ನು ಬಳಸಿಕೊಂಡು 7:40ರ ವೇಳೆಗೆ ಆರ್‌ಎಲ್‌ವಿ ಏರ್‌ಸ್ಟ್ರಿಪ್‌ನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ಇದನ್ನೂ ಓದಿ: ಇಟಲಿಯಲ್ಲಿ ಇಂಗ್ಲಿಷ್ ಭಾಷೆ ಬ್ಯಾನ್ – ಸಂವಹನ ನಡೆಸಿದರೆ ಭಾರೀ ದಂಡ

ಒಂದು ವೇಳೆ ಬಾಹ್ಯಾಕಾಶದಿಂದ ರಾಕೆಟ್ ಬಂದರೆ ಯಾವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆಯೋ ಅಂಥದ್ದೇ ಪರಿಸ್ಥಿತಿಯಲ್ಲಿ ಮರು ಬಳಕೆ ಮಾಡಬಹುದಾದ ಉಡಾವಣಾ ವಾಹನದ ಸ್ವಾಯತ್ತ ಲ್ಯಾಂಡಿಂಗ್ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. ಅಂದರೆ ಮಾನವ ರಹಿತ ರಾಕೆಟ್, ಲ್ಯಾಂಡಿಂಗ್ ಹೈ ಸ್ಪೀಡ್ ಮತ್ತು ರಿಟರ್ನಿಂಗ್ ಸೇಮ್ ಪಾಥ್‌ನ ಸ್ಥಿತಿಗಳಲ್ಲಿ ಈ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. ಸ್ವಾಯತ್ತ ಲ್ಯಾಂಡಿಂಗ್ ಪರೀಕ್ಷೆಗೆ ಸ್ಥಳೀಯ ನ್ಯಾವಿಗೇಷನ್, ಉಪಕರಣಗಳು, ಸಂವೇದಕಗಳು ಸೇರಿದಂತೆ ಇತ್ಯಾದಿ ಸ್ಥಳೀಯ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗಿದೆ. ಈ ಎಲ್ಲಾ ವ್ಯವಸ್ಥೆಗಳನ್ನು ಇಸ್ರೋ ಅಭಿವೃದ್ಧಿಪಡಿಸಿದೆ.

ಭಾರತೀಯ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಕನಸು ವಾಸ್ತವಕ್ಕೆ ಬರುವಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಗೆ ಕೈ ಹಾಕಿದ್ದು ಯಾಕೆ?
ಪ್ರಸ್ತುತ ಇಸ್ರೋ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ರಾಕೆಟ್ ಮೂಲಕ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುತ್ತದೆ. ಆದರೆ ರಾಕೆಟ್ ಮರಳಿ ಬರುವುದಿಲ್ಲ. ಒಂದೊಂದೆ ಹಂತ ದಾಟುತ್ತಿದ್ದಂತೆ ಹೊತ್ತಿ ಉರಿದು ಬೀಳುತ್ತದೆ. ಒಂದು ರಾಕೆಟ್ ನಿರ್ಮಾಣಕ್ಕೆ ಕೋಟ್ಯಂತರ ರೂ. ವೆಚ್ಚವಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವದೆಲ್ಲೆಡೆ ಮರಳಿ ಭೂಮಿಗೆ ಲ್ಯಾಂಡ್ ಆಗುವ ರಾಕೆಟ್ ಅಭಿವೃದ್ಧಿ ಪಡಿಸಲಾಗುತ್ತದೆ. ಟೆಸ್ಲಾ ಕಂಪನಿಯ ಸಂಸ್ಥಾಪಕ, ಟ್ವಿಟ್ಟರ್ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿ ಈಗಾಗಲೇ ಮರುಬಳಕೆ ಮಾಡುವ ರಾಕೆಟ್ ಅಭಿವೃದ್ಧಿ ಪಡಿಸಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ಪ್ರಯೋಗ ನಡೆಸುತ್ತಿದೆ. ಇದನ್ನೂ ಓದಿ: ಮತ್ತೊಮ್ಮೆ ಬೂಸ್ಟರ್ ಡೋಸ್ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಸಲಹೆ