IPL 2023: ಮಾರ್ಕ್‌ ಮಾರಕ ಬೌಲಿಂಗ್‌, ಡೆಲ್ಲಿಗೆ ಡಿಚ್ಚಿ ಕೊಟ್ಟ ಲಕ್ನೋ – ರಾಹುಲ್‌ ಸೈನ್ಯಕ್ಕೆ 50 ರನ್‌ಗಳ ಭರ್ಜರಿ ಜಯ

ಲಕ್ನೋ: ಕೇಲ್‌ ಮೇಯರ್ಸ್‌ ಬೆಂಕಿ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capital) ವಿರುದ್ಧ 50 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, 16ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ಶುಭಾರಂಭ ಪಡೆದುಕೊಂಡಿದೆ.

ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೆ.ಎಲ್‌.ರಾಹುಲ್‌ (KL Rahul) ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 193 ರನ್‌ ಸಿಡಿಸಿತ್ತು. 194 ರನ್‌ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಚೇಸಿಂಗ್‌ ಆರಂಭಿಸಿದ ಡೆಲ್ಲಿ ತಂಡ ಉತ್ತಮ ಶುಭಾರಂಭ ಪಡೆದುಕೊಂಡಿತ್ತು. ಮೊದಲ ವಿಕೆಟ್‌ ಪತನಕ್ಕೆ 4.3 ಓವರ್‌ಗಳಲ್ಲಿ 41 ರನ್‌ ಕಲೆಹಾಕಿತ್ತು. ಆ ನಂತರ ತಂಡದ ಒಂದೊಂದೇ ವಿಕೆಟ್‌ ಪತನಗೊಂಡಿತು.

ಡೆಲ್ಲಿ ತಂಡದಲ್ಲಿ ನಾಯಕ ಡೇವಿಡ್‌ ವಾರ್ನರ್‌ (David Warner) ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲವಾದರು. ಡೇವಿಡ್‌ ವಾರ್ನರ್‌ 48 ಎಸೆತಗಳಲ್ಲಿ 56 ರನ್‌ (7 ಬೌಂಡರಿ), ರಿಲೀ ರೋಸೌವ್ 20 ಎಸೆತಗಳಲ್ಲಿ 30 ರನ್‌ ಗಳಿಸಿದ್ದು ಬಿಟ್ಟರೆ, ಯಾರೊಬ್ಬರು ಹೆಚ್ಚುವರಿ ರನ್‌ ಕೊಡುಗೆ ನೀಡಲಿಲ್ಲ. ಇದರಿಂದ ತಂಡ ಹೀನಾಯ ಸೋಲಿಗೆ ಗುರಿಯಾಯಿತು.

ಪೃಥ್ವಿ ಶಾ 12 ರನ್‌, ಸರ್ಫರಾಜ್‌ ಖಾನ್‌ 4 ರನ್‌, ರೋಮ್ನನ್‌ ಪೋವೆಲ್‌ 1 ರನ್‌, ಅಮಮಾನ್‌ ಹಕೀಮ್‌ ಖಾನ್‌ 4 ರನ್‌ ಗಳಿಸಿದರೆ, ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಮಿಚೆಲ್‌ ಮಾರ್ಚ್‌ (Mitchell Marsh) ಶೂನ್ಯಕ್ಕೆ ಔಟಾಗಿ ಕೈಕೊಟ್ಟರು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ 16 ರನ್‌, ಚೇತನ್‌ ಸಕಾರಿಯಾ 4 ರನ್‌ ಗಳಿಸಿ ಔಟಾದರು. ಕುಲ್‌ದೀಪ್‌ ಯಾದವ್‌ 6 ರನ್‌, ಮುಕೇಶ್‌ ಕುಮಾರ್‌ ಯಾವುದೇ ರನ್‌ ಗಳಿಸದೇ ಕ್ರೀಸ್‌ನಲ್ಲಿ ಉಳಿದರು.

ಮಿಂಚಿದ ಮಾರ್ಕ್‌:
16ನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲೇ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮಾರ್ಕ್‌ ವುಡ್‌ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಗೆಲುವಿಗೆ ಕಾರಣರಾದರು. ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರ ಮಾರ್ಕ್‌ ವುಡ್‌ (Mark Wood) 5 ವಿಕೆಟ್‌ ಕಿತ್ತರೆ, ಅವೇಶ್‌ ಖಾನ್‌, ರವಿ ಬಿಷ್ಣೋಯ್ ತಲಾ 2 ವಿಕೆಟ್‌ ಕಿತ್ತು ಮಿಂಚಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಕೇಲ್ ಮೇಯರ್ಸ್ ಸ್ಫೋಟಕ ಪ್ರದರ್ಶನ ನೀಡಿ ಮಿಂಚಿದರು. ಆರಂಭದಲ್ಲಿ ಕೆ.ಎಲ್‌ ರಾಹುಲ್‌ ವಿಕೆಟ್‌ ಕಳೆದುಕೊಂಡು ಆಘಾತ ಎದುರಿಸಿತ್ತು. ಆ ನಂತರ ಕೇಲ್ ಮೇಯರ್ಸ್ ಅಬ್ಬರ ಶುರುವಾಯಿತು.

ಆರಂಭಿಕ ಆಟಗಾರ ಕೇಲ್ ಮೇಯರ್ಸ್ (Kyle Mayers) ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳನ್ನು ಹಿಗ್ಗಾಮುಗ್ಗ ಬೆಂಡೆತ್ತಿದರು. 2ನೇ ವಿಕೆಟ್‌ಗೆ ದೀಪಕ್ ಹೂಡಾ ಅವರೊಂದಿಗೆ ಭರ್ಜರಿ 79 ರನ್‌ಗಳ ಜೊತೆಯಾಟ ಆಡಿದರು. ಈ ನಡುವೆ ದೀಪಕ್‌ ಹೂಡಾ 17 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ಬೆನ್ನಲ್ಲೇ ಮೇಯರ್ಸ್‌ ಸಹ 38 ಎಸೆತಗಳಲ್ಲಿ 73 ರನ್ (7 ಸಿಕ್ಸರ್‌, 3 ಬೌಂಡರಿ) ಚಚ್ಚಿ ಔಟಾದರು.

ಕೊನೆಯ ಹಂತದಲ್ಲಿ ನಿಕೋಲಸ್‌ ಪೂರನ್ ಕೂಡ ಅದ್ಭುತ ಪ್ರದರ್ಶನ ನೀಡಿದ್ದು 36 ರನ್‌ಗಳ ಕೊಡುಗೆ ನೀಡಿದರು. ಯುವ ಆಟಗಾರ ಆಯುಷ್ ಬದೋನಿ ಕೂಡ ಸ್ಫೋಟಕ ಬ್ಯಾಟಿಂಗ್‌ ನಡೆಸಿ, ತಂಡದ ಮೊತ್ತ 193ಕ್ಕೆ ತಂದು ನಿಲ್ಲಿಸಿದರು. ಆಯುಷ್ ಬದೋನಿ 2 ಭರ್ಜರಿ ಸಿಕ್ಸರ್‌, 1 ಬೌಂಡರಿಯೊಂದಿಗೆ 7 ಎಸೆತಗಳಲ್ಲಿ 18 ರನ್‌ಗಳಿಸಿದರು.

ಡೆಲ್ಲಿ ಪರ ಖಲೀಲ್‌ ಅಹ್ಮದ್‌, ಚೇತನ್‌ ಸಕಾರಿಯಾ ತಲಾ 2 ವಿಕೆಟ್‌ ಪಡೆದರೆ, ಅಕ್ಷರ್‌ ಪಟೇಲ್‌, ಕುಲ್‌ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.