ಒಂದು ಆಸ್ಕರ್ ಪ್ರಶಸ್ತಿಗೆ 80 ಕೋಟಿ ಖರ್ಚು : ಆರ್.ಆರ್.ಆರ್ ನಿರ್ಮಾಪಕ ಪ್ರತಿಕ್ರಿಯೆ

ನಾಟು ನಾಟು ಹಾಡಿಗೆ ಆಸ್ಕರ್ (Oscar) ಪ್ರಶಸ್ತಿ ಬರುವುದಕ್ಕಾಗಿ ಚಿತ್ರತಂಡ ಬರೋಬ್ಬರಿ 80 ಕೋಟಿ ಖರ್ಚು ಮಾಡಿದೆ ಎಂಬ ಆರೋಪ ಆರ್.ಆರ್.ಆರ್ (R.R.R) ಚಿತ್ರತಂಡದ ಮೇಲಿದೆ. ನಿರ್ದೇಶಕ ರಾಜಮೌಳಿ (Rajamouli) ಈ ಪರಿ ಹಣವನ್ನು ನಿರ್ಮಾಪಕರಿಂದ ಖರ್ಚು ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಒಂದೇ ಒಂದು ಆಸ್ಕರ್ ಪ್ರಶಸ್ತಿಗಾಗಿ ಅಷ್ಟೊಂದು ಹಣ ಖರ್ಚು ಮಾಡುವ ಜರೂರತ್ತಾದರೂ ಏನಿತ್ತು ಎಂದೂ ಪ್ರಶ್ನೆ ಮಾಡಲಾಗಿತ್ತು.

ಅದರಲ್ಲೂ ತೆಲುಗಿನ ನಿರ್ದೇಶಕರೊಬ್ಬರು ‘ಆಸ್ಕರ್ ಪ್ರಶಸ್ತಿಗಾಗಿ ರಾಜಮೌಳಿ ಮಾಡಿದ ಖರ್ಚಿನಲ್ಲಿ ನಾನು ನಾಲ್ಕು ಚಿತ್ರಗಳನ್ನು ತಯಾರಿಸುತ್ತಿದ್ದೆ’ ಎಂದು ಹೇಳುವ ಮೂಲಕ ಉರಿವ ಬೆಂಕಿಗೆ ತುಪ್ಪ ಸುರಿದಿದ್ದರು. ಈಗ ಈ ಎಲ್ಲ ಆರೋಪಗಳಿಗೆ ನಿರ್ಮಾಪಕ ದಾನಯ್ಯ (Danaiah) ಉತ್ತರಿಸಿದ್ದಾರೆ. ಅವರು ಆಸ್ಕರ್ ಸಮಾರಂಭದಲ್ಲಿ ಭಾಗಿ ಆಗದೇ ಇದ್ದರೂ, ಎದ್ದಿರುವ ಚರ್ಚೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮವೊಂದರ ಜೊತೆ ಮಾತನಾಡಿರುವ ಸಿನಿಮಾದ ನಿರ್ಮಾಪಕ ದಾನಯ್ಯ, ಅಷ್ಟೊಂದು ಹಣ ಖರ್ಚು ಮಾಡಿದ್ದೇವೆ ಎನ್ನುವುದು ಸುಳ್ಳು. ಒಂದು ಪ್ರಶಸ್ತಿಗಾಗಿ 80 ಕೋಟಿ ರೂಪಾಯಿಯನ್ನು ಯಾರೂ ಖರ್ಚು ಮಾಡುವುದಿಲ್ಲ. ಅದರಿಂದ ಯಾವುದೇ ಉಪಯೋಗ ಕೂಡ ಇಲ್ಲ. ನಾನಂತೂ ಪ್ರಶಸ್ತಿಗಾಗಿ ಹಣವನ್ನು ನೀಡಿಲ್ಲ. ಉಳಿದ ವಿಚಾರ ನನಗೆ ಗೊತ್ತಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

ಆರ್.ಆರ್.ಆರ್ ಗೆಲುವಿನ ನಂತರ ರಾಜಮೌಳಿ ಮತ್ತು ದಾನಯ್ಯ ನಡುವೆ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ ಎಂದು ಕೇಳಿ ಬಂದಿತ್ತು. ಹಾಗಾಗಿಯೇ ರಾಜಮೌಳಿ ಭಾಗಿಯಾದ ಯಾವ ಕಾರ್ಯಕ್ರಮದಲ್ಲೂ ದಾನಯ್ಯ ಕಾಣಿಸಿಕೊಳ್ಳಲಿಲ್ಲ. ಗೋಲ್ಡನ್ ಗ್ಲೋಬ್, ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲೂ ಅವರು ಇರಲಿಲ್ಲ. ಆದರೂ, ಸಂದರ್ಶನದಲ್ಲಿ ರಾಜಮೌಳಿ ಬಗ್ಗೆ ದಾನಯ್ಯ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

Comments

Leave a Reply

Your email address will not be published. Required fields are marked *