96ನೇ ವಯಸ್ಸಿನಲ್ಲಿ ಮೊದಲ ಪರೀಕ್ಷೆ ಬರೆದ ಅಜ್ಜಿ

-ನಾನು ಓದಿರುವ ಎಲ್ಲ ಪಠ್ಯವನ್ನು ಕೇಳಿಲ್ಲ ಅಂತ ಅಜ್ಜಿಯ ಮುನಿಸು

ತಿರುವನಂತಪುರ: 96ನೇ ವಯಸ್ಸಿನಲ್ಲಿ ಅಜ್ಜಿಯೊಬ್ಬರು ಮೂರನೇ ವರ್ಗದ ಪರೀಕ್ಷೆ ಬರೆದಿದ್ದಾರೆ. ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆದಿರುವ ಅಜ್ಜಿ, ಪ್ರಶ್ನೆ ಪತ್ರಿಕೆಯಲ್ಲಿ ತಾನು ಓದಿರುವ ಎಲ್ಲವನ್ನು ಕೇಳಿಯೇ ಇಲ್ಲ ಎಂದು ಶಿಕ್ಷಕರ ಮೇಲೆ ಮುನಿಸಿಕೊಂಡಿದ್ದಾರೆ.

96 ವರ್ಷದ ಕಾತ್ಯಾಯಿನಿ ಎಂಬವರೇ ಮೂರನೇ ತರಗತಿಯ ಪರೀಕ್ಷೆಗೆ ಹಾಜರಾದ ಅಜ್ಜಿ. ಅಜ್ಜಿಯೊಂದಿಗೆ ಇತರೆ ಹಿರಿಯ ನಾಗರಿಕರು ಸಹ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳಲ್ಲಿ ಕಾತ್ಯಾಯಿನಿ ಅಜ್ಜಿಯೇ ಸೀನಿಯರ್. ಅಲಪ್ಪುಜ್ಹಾ ನಗರದ ಬಳಿಯ ಕಾನಿಚೆನೆಲ್ಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಭಾನುವಾರ ನಡೆದ ಪರೀಕ್ಷೆಗೆ ಕಾತ್ಯಾಯಿನಿ ಅಜ್ಜಿ ಹಾಜರಾಗಿದ್ದರು. ಅಜ್ಜಿಯ ಜೊತೆ 45 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂಗ್ಲಿಷ್‍ನಲ್ಲಿ ನೂರಕ್ಕೆ ನೂರು:
ಇಂಗ್ಲಿಷ್ ಮೌಖಿಕ ಪರೀಕ್ಷೆಯಲ್ಲಿ ಶೇ.100 ರಷ್ಟು ಅಂಕಗಳನ್ನು ಪಡೆದುಕೊಂಡಿದ್ದೇನೆ. ಉಳಿದೆರಡು ವಿಭಾಗಗಳ ಫಲಿತಾಂಶ ಘೋಷಣೆಯಾಗಿಲ್ಲ. ಫಲಿತಾಂಶ ಬಂದ ಬಳಿಕ ಮುಂದಿನ ವರ್ಷ ನಾಲ್ಕನೇ ತರಗತಿಗೆ ಪ್ರವೇಶ ಪಡೆಯುತ್ತೇನೆ. ಗಣಿತ ಮತ್ತು ಇಂಗ್ಲಿಷ್ ಗಾಗಿ ಸತತ ಆರು ತಿಂಗಳು ಪ್ರತ್ಯೇಕವಾಗಿ ಟ್ಯೂಷನ್ ತೆಗೆದುಕೊಳ್ಳಲಾಗಿತ್ತು ಎಂದು ಕಾತ್ಯಾಯಿನಿ ಅಜ್ಜಿ ತಮ್ಮ ಪರೀಕ್ಷಾ ತಯಾರಿಯನ್ನು ಹೇಳಿಕೊಂಡಿದ್ದಾರೆ.

‘ಅಕ್ಷರಲಕ್ಷಮ’ ಯೋಜನೆ:
ಒಟ್ಟು 45 ಹಿರಿಯ ನಾಗರಿಕರು ಕೇರಳ ರಾಜ್ಯ ಸರ್ಕಾರದ `ಅಕ್ಷರಲಕ್ಷಮ’ ಯೋಜನೆಯಡಿ ಪರೀಕ್ಷೆ ಬರೆದಿದ್ದಾರೆ. ಶೇ.100 ರಷ್ಟು ಸಾಕ್ಷರತೆ ಪ್ರಮಾಣ ಹೊಂದಲು ಕೇರಳ ಸರ್ಕಾರ ಅಕ್ಷರಮಕ್ಷಮ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಅಶಿಕ್ಷಿತರಾಗಿರುವ ಹಿರಿಯ ನಾಗರಿಕರಿಗೆ ಆರು ತಿಂಗಳಗಳ ಕಾಲ ತರಬೇತಿ ನೀಡಲಾಗುತ್ತದೆ. ಸಾಕ್ಷರತೆಯ ಪ್ರಮಾಣದಲ್ಲಿ ಕೇರಳ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಆದರೂ ಶಿಕ್ಷಣದಿಂದ ವಂಚಿತರಾಗಿರುವ ಹಿರಿಯರನ್ನು ಹುಡುಕಿ ಶಿಕ್ಷಣ ನೀಡುವುದಕ್ಕಾಗಿ ರಾಜ್ಯ ಸರ್ಕಾರ ಅಕ್ಷರಲಕ್ಷಮ ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ.

ಜನವರಿಯಲ್ಲಿ ಆರಂಭವಾದ ಈ ವಿಶೇಷ ಅಭಿಯಾನದಲ್ಲಿ ಒಟ್ಟು 45 ಸಾವಿರ ಹಿರಿಯ ನಾಗರಿಕರು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಯಲ್ಲಿ ಒಟ್ಟು ಮೂರು ವಿಭಾಗಗಳಿದ್ದು, ಒಂದು ಇಂಗ್ಲಿಷ್ ಮೌಖಿಕ, ಮಲೆಯಾಳಂ ಬರೆಯುವಿಕೆ, ಗಣಿತ, ಎಲ್ಲ 45 ಸಾವಿರ ಜನರು ಮೂರು ವಿಷಯಗಳನ್ನು ಬರೆದಿದ್ದಾರೆ. ಪ್ರತಿಯೊಂದು ವಿಭಾಗಕ್ಕೂ 30 ಅಂಕಗಳನ್ನು ನಿಗದಿ ಮಾಡಲಾಗಿತ್ತು.

Comments

Leave a Reply

Your email address will not be published. Required fields are marked *