90 ಮನೆ, 150 ಜನ ಇಡೀ ಹಳ್ಳಿಗೆ ಒಂದೇ ಟಿವಿ

– ಒಂದೊಂದು ದಿನ ಒಂದೊಂದು ಭಾಷೆ

ಚಿಕ್ಕಮಗಳೂರು: ಮನೆಗೆ ಒಂದು ಟಿವಿ ಇದ್ದರೆ ಜಗಳ ನಡೆಯುವುದು ಸಾಮಾನ್ಯ. ಒಬ್ಬರು ನ್ಯೂಸ್ ನೋಡಬೇಕು ಅಂತಾರೆ. ಮತ್ತೊಬ್ಬರು ಸಿನಿಮಾ ಬೇಕು ಅಂತಾರೆ. ಮಗದೊಬ್ಬರು ಧಾರಾವಾಹಿ ಬೇಕು ಅಂತಾರೆ. ಕೆಲವರು ಸಿಟ್ಟಾಗಿ ರೂಂ ಸೇರುತ್ತಾರೆ. ಆದರೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಮುಖ ಸಮೀಪದ ಗೋಪಾಲ ಕಾಲೋನಿಯಲ್ಲಿ ಇಡೀ ಗ್ರಾಮಕ್ಕೆ ಇರೋದೊಂದೆ ಟಿವಿ.

ಆಶ್ಚರ್ಯ ಅನ್ನಿಸಿದರು ನಂಬಲೇಬೇಕು. ಇಲ್ಲಿ ಸುಮಾರು 80-90 ಮನೆಗಳಿವೆ. 150 ಜನರಿದ್ದಾರೆ. ಈ 150 ಜನರಿಗೆ ಇರುವುದೊಂದೆ ಟಿವಿ. ಅದರಲ್ಲೇ ಎಲ್ಲರೂ ನೋಡಬೇಕು. ಅದು ಕೂಡ ಸಂಜೆ ಆರಕ್ಕೆ ಬಂದು ಬೆಳಗ್ಗೆ ಆರಕ್ಕೆ ಹೋಗೋ ಕರೆಂಟ್‍ನಲ್ಲಿ. ಈ ಗ್ರಾಮದಲ್ಲಿ ಕರೆಂಟ್ ಕೂಡ ಇಲ್ಲ. ಇಂದಿಗೂ ಇಲ್ಲಿ ಸಿಮೇಎಣ್ಣೆ ದೀಪದ ಬೆಳಕಲ್ಲಿ ಜನ ಬದುಕುತ್ತಿದ್ದಾರೆ. ಬೀದಿ ದೀಪವನ್ನು ಸಮುದಾಯ ಭವನಕ್ಕೆ ಎಳೆದುಕೊಂಡಿದ್ದಾರೆ. ಅದರಲ್ಲೇ ಮೊಬೈಲ್ ಚಾರ್ಜ್, ಟಿವಿ ಎಲ್ಲಾ. ಆದರೆ ಇಡೀ ಊರಿಗೆ ಒಂದೇ ಒಂದು ಟಿವಿ ಇದ್ದರೂ ಕೂಡ ಒಂದೇ ಒಂದು ದಿನ ಕೂಡ ಗ್ರಾಮಸ್ಥರ ಮಧ್ಯೆ ಮನಸ್ತಾಪ ಬಂದಿಲ್ಲ ಅನ್ನೋದು ಮತ್ತೊಂದು ವಿಶೇಷ.

ಗ್ರಾಮಸ್ಥರ ಮಧ್ಯ ಈ ಒಗ್ಗಟ್ಟಿಗೆ ಗ್ರಾಮಸ್ಥರೇ ಮಾಡಿಕೊಂಡ ನಿರ್ಣಯವೇ ಕಾರಣ. ಅದನ್ನ ಕೇಳಿದರೆ ನೀವು ಮತ್ತೊಮ್ಮೆ ಆಶ್ಚರ್ಯಚಕಿತರಾಗುತ್ತೀರಾ. ಯಾಕೆಂದರೆ ಬುಧವಾರ ಮಲೆಯಾಳಿಗಳು. ಗುರುವಾರ ತಮಿಳಿಗರು. ಶುಕ್ರವಾರ ಮುಸ್ಲಿಮರು. ಶನಿವಾರ-ಭಾನುವಾರ ಹಿಂದುಗಳು. ಸೋಮವಾರ ಧಾರಾವಾಹಿ. ಮಂಗಳವಾರ ಸಿನಿಮಾ. ಬುಧವಾರ ಮತ್ತದೆ ರೊಟೀನ್. ಭಾರತದ ಕ್ರಿಕೆಟ್ ಮ್ಯಾಚ್ ಇದ್ದರೆ ಯಾರೂ ನೋಡುವಂತಿಲ್ಲ. ಹುಡುಗರು ಕ್ರಿಕೆಟ್ ನೋಡುತ್ತಾರೆ. ಅಷ್ಟೆ ಅಲ್ಲದೆ ಇವರು ದಿನಕ್ಕೆ ಟಿವಿ ನೋಡೋದು ಕೇವಲ ನಾಲ್ಕೈದು ಗಂಟೆಯಷ್ಟೇ. ಸಂಜೆ ಆರರಿಂದ ರಾತ್ರಿ ಹತ್ತು ಅಥವಾ ಹನ್ನೊಂದು ಗಂಟೆವರೆಗೆ ಅಷ್ಟೇ. ಇರೋದು ಎರಡೇ ಪ್ಲಗ್. ಒಂದು ಟಿವಿಗೆ ಮತ್ತೊಂದು ಮೊಬೈಲ್‍ಗೆ. ಒಬ್ಬರಾದ ಮೇಲೆ ಒಬ್ಬರು ಮೊಬೈಲ್ ಚಾರ್ಜ್‍ಗೆ ಹಾಕಿಕೊಳ್ಳಬೇಕು. ಕಳೆದ ಒಂದೂವರೆ ದಶಕದಿಂದಲೂ ಇವರ ಟಿವಿ ಬದುಕು ಹೀಗೆ ಇರೋದು.

ಇಲ್ಲಿ ವಾಸವಿರೋರೆಲ್ಲಾ ಕುದುರೆಮುಖ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು. ಬಹುತೇಕರು ಹುಟ್ಟಿ ಬೆಳೆದಿರೋದು ಇದೇ ಊರಲ್ಲಿ. ಕಂಪನಿ ಕ್ಲೋಸ್ ಆದ ಮೇಲೆ ಸುತ್ತಮುತ್ತಲಿನ ಹಳ್ಳಿ, ತೋಟಗಳಲ್ಲಿ ಕೆಲಸ ಮಾಡಿಕೊಂಡು ಇಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಪಡಿತರ ಚೀಟಿ ಪ್ರಕಾರ ಇಲ್ಲಿ 250 ಕುಟುಂಬಗಳು ವಾಸವಿವೆ. ಆದರೆ ಮಕ್ಕಳ ಓದು, ಕೂಲಿ, ಬದುಕಿನ ಅನಿವಾರ್ಯವಾಗಿ ಸುತ್ತಮುತ್ತಲಿನ ಊರುಗಳಲ್ಲಿ ವಾಸವಿದ್ದಾರೆ. ಇಲ್ಲಿ 80-90 ಕುಟುಂಬಗಳು ವಾಸವಿವೆ. ಕುದುರೆಮುಖ ಅಂದರೆ ಕೇಳೋದೆ ಬೇಡ. ಅತಿ ಹೆಚ್ಚು ಮಳೆ ಬೀಳುವ ಪ್ರದೇಶ. ಇಲ್ಲಿ ವರ್ಷದಲ್ಲಿ ಸರಿಸುಮಾರು ಆರೇಳು ತಿಂಗಳು ಕರೆಂಟ್ ಇರಲ್ಲ. ಇದ್ದಾಗ ಸಂಜೆ ಆರರ ಬಳಿಕ ಬರುವ ಕರೆಂಟನ್ನೇ ಇವರು ನೆಚ್ಚಿಕೊಂಡಿದ್ದಾರೆ.

ಆಗ ಸಂಜೆ ಆರರಿಂದ ರಾತ್ರಿ 10 ರಿಂದ 11 ಗಂಟೆವರೆಗೆ ಟಿವಿ ನೋಡುತ್ತಾರೆ. 2005 ರಿಂದ ಇವರ ಟಿವಿ ಬದುಕು ಹೀಗೆ ಇರೋದು. ಆದರೆ ಇಂದಿಗೂ ಗ್ರಾಮಸ್ಥರ ಮಧ್ಯೆ ಒಂದೇ ಒಂದು ಸಣ್ಣ ಮನಸ್ತಾಪ ಕೂಡ ಬಂದಿಲ್ಲ. ದುರಂತ ಅಂದರೆ, ಇದೀಗ ಈ ಟಿವಿ ಕೂಡ ಕೆಟ್ಟೋಗಿದೆ. ಈಗ ಇವರಿಗೆ ಕರೆಂಟ್ ಇದ್ದಾಗ ರಾತ್ರಿ ಚಾರ್ಚ್ ಆದ ಮೊಬೈಲ್ ಬದುಕಾಗಿದೆ. 2021ನೇ ಇಸವಿಯಲ್ಲಿ ಕರೆಂಟ್ ಇಲ್ಲದ ಗ್ರಾಮ ಅಂದರೆ ಇದೊಂದೆ ಅಂತ ನೋವಿನಿಂದ ಮಾತನಾಡುತ್ತಾರೆ ಇಲ್ಲಿನ ಜನ.

ಇಲ್ಲಿನ ಜನ ಮೂಲಭೂತ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಆದರೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಈ ಊರನ್ನು ಎಂ.ಪಿ. ಅಥವಾ ಎಂ.ಎಲ್.ಎ. ಇವರಿಬ್ಬರೇ ಅಭಿವೃದ್ಧಿ ಮಾಡಬೇಕು. ಇವರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಲ್ಲ. ಆದರೆ ಶಾಸಕರು ಹಾಗೂ ಸಂಸದರಿಂದ ಯಾವುದೇ ಅಭಿವೃದ್ಧಿಯಾಗಿಲ್ಲ ಅಂತಾರೆ ಸ್ಥಳೀಯರು.

Comments

Leave a Reply

Your email address will not be published. Required fields are marked *