ಶಿರಸಿ | ಏರ್ ಗನ್ ಮಿಸ್ ಫೈರ್ ಕೇಸ್‌ಗೆ ಬಿಗ್ ಟ್ಟಿಸ್ಟ್ – ಬಾಲಕನ ಸಾವಿಗೆ ತಮ್ಮ ಕಾರಣನಲ್ಲ!

ಕಾರವಾರ: ಶಿರಸಿಯ ಸೋಮನಹಳ್ಳಿಯಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕ ಕೈಯ್ಯಿಂದ ಏರ್ ಗನ್ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಘಟನೆಗೆ ಬಿಗ್ ಟ್ಟಿಸ್ಟ್ ಸಿಕ್ಕಿದೆ. ಬಾಲಕ ತನ್ನ ಅಣ್ಣನಿಗೆ ಗುಂಡು ಹಾರಿಸಿಲ್ಲ ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

ಕೇಶವ ಹೆಗಡೆ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಎಂಬವರ ಇಬ್ಬರು ಮಕ್ಕಳು (ಅಣ್ಣ, ತಮ್ಮ) ಆಟವಾಡುತ್ತಿದ್ದ ಸಂದರ್ಭದಲ್ಲಿ ಏರ್ ಗನ್ ಫೈರ್ ಆಗಿ ದುರ್ಘಟನೆ ನಡೆದಿತ್ತು ಎನ್ನಲಾಗಿತ್ತು. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ ತಮ್ಮ ಆಕಸ್ಮಿಕವಾಗಿ ಗುಂಡು ಹಾರಿಸಿದ್ದ. ಇದರಿಂದ ಅಣ್ಣ ಕರಿಯಪ್ಪ ( 9 ) ಮೃತಪಟ್ಟಿರುವುದಾಗಿ ಹೇಳಲಾಗಿತ್ತು. ಆದರೆ ಶಿರಸಿ ಗ್ರಾಮೀಣ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ತನಿಖೆ ನಡೆಸಿದಾಗ ಅಸಲಿ ವಿಷಯ ಹೊರಬಂದಿದೆ.ಇದನ್ನೂ ಓದಿ: ಕಾರವಾರ| ಪುಟ್ಟ ಮಕ್ಕಳಿಂದ ಏರ್ ಗನ್‌ನಲ್ಲಿ ಆಟ; ಮಿಸ್ ಫೈರ್ ಆಗಿ ತಮ್ಮನ ಕೈಯಿಂದ ಸಾವುಕಂಡ ಅಣ್ಣ

ಮೃತ ಬಾಲಕನ ಸಹೋದರನ ಕೈನಿಂದ ಫೈರ್ ಆಗಿದ್ದಲ್ಲ, ಕೆಲಸಗಾರ ನಿತೀಶ್ ಗೌಡನ ಕೈನಿಂದ ಮಿಸ್ ಫೈರ್ ಆಗಿ ಬಾಲಕ ಸಾವು ಕಂಡಿರುವುದು ಬೆಳಕಿಗೆ ಬಂದಿದೆ. ಇಬ್ಬರು ಮಕ್ಕಳು ಆಟವಾಡುತ್ತಾ ಏರ್ ಗನ್ ಹಿಡಿದಿದ್ದ ನಿತೀಶ್ ಗೌಡ ಬಳಿ ಬಂದಿದ್ದರು. ಅಂಗವಿಕಲನಾಗಿದ್ದ ನಿತೀಶ್ ಗೌಡನಿಗೆ ಎಡಗೈ ಊನವಾಗಿದ್ದು ಮಕ್ಕಳು ಬಂದ ಹಿನ್ನಲೆಯಲ್ಲಿ ಗನ್ ಸರಿಸುವಾಗ ಎಡ ಕೈ ತಾಗಿ ಎದುರಿಗಿದ್ದ ಬಾಲಕ ಕರಿಯಪ್ಪನ ಎದೆಗೆ ಗುಂಡು ತಾಗಿದೆ. ಅತೀ ಸಮೀಪದಲ್ಲೇ ಇದ್ದುದರಿಂದ ಎದೆಗೆ ನೇರವಾಗಿ ಗುಂಡು ಹೊಕ್ಕು ಹೃದಯ ಸೀಳಿ ರಕ್ತಸ್ರಾವವಾಗಿ ಬಾಲಕ ಮೃತಪಟ್ಟಿದ್ದಾನೆ.

ಇನ್ನು ನಿತೀಶ್ ಗೌಡನಿಗೆ ಏರ್ ಗನ್ ಬಳಸಲು ಬರುವುದಿಲ್ಲ, ತರಬೇತಿಯೂ ಇಲ್ಲ. ಹೀಗಾಗಿ ಆತನ ಅಚಾತುರ್ಯದಲ್ಲಿ ಫೈರ್ ಆಗಿದ್ದು ತನಿಖೆಯಿಂದ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನಿತೀಶ್ ಹಾಗೂ ಮನೆ ಮಾಲೀಕ ರಾಘವೇಂದ್ರ ಹೆಗಡೆ ವಿರುದ್ಧ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಮಂಡ್ಯ | ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಬೆಂಗ್ಳೂರಿನ ಇಬ್ಬರು ಬಿಬಿಎಂ ವಿದ್ಯಾರ್ಥಿಗಳ ದುರ್ಮರಣ