9ರ ಬಾಲಕಿ ಮೇಲೆ 50 ವರ್ಷದ ವ್ಯಕ್ತಿಯಿಂದ ಅತ್ಯಾಚಾರ- ಆರೋಪಿಯನ್ನು ನೇಣಿಗೇರಿಸುವಂತೆ ಪೋಷಕರ ಒತ್ತಾಯ

ಹೈದರಾಬಾದ್: ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದಕ್ಕೆ ಕೇಂದ್ರ ಸಂಪುಟ ಅಸ್ತು ಅಂದ ಬಳಿಕವೂ ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. ಇಂತದ್ದೇ ಒಂದು ಘಟನೆ ಇದೀಗ ಆಂಧ್ರಪ್ರದೇಶದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಹೌದು. ಆಂಧ್ರಪ್ರದೇಶದ ಗುಂಟೂರು ಎಂಬಲ್ಲಿ 9 ವರ್ಷದ ಬಾಲಕಿ ಮೇಲೆ 50 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ಹಾಗೂ ಸ್ಥಳೀಯರು ಹೆದ್ದಾರಿ ತಡೆದು ಆರೋಪಿಯನ್ನು ಬಂಧಿಸಿ ನೇಣಿಗೆ ಹಾಕುವಂತೆ ಪ್ರತಿಭಟನೆ ಮಾಡುವ ಮೂಲಕ ಒತ್ತಾಯಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?: ಬುಧವಾರ ಮಧ್ಯಾಹ್ನ ಬಾಲಕಿಯ ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿದ್ದು, ಹೊಟ್ಟೆ ನೋವಿನಿಂದ ಬಳುತ್ತಿರುವುದಾಗಿ ಪೋಷಕರಿಗೆ ತಿಳಿಸಿದ್ದಾಳೆ. ಕೂಡಲೇ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕಿಯನ್ನು ಪರೀಕ್ಷೆ ಮಾಡಿದ ವೈದ್ಯರು, ಆಕೆಯ ದೇಹದಲ್ಲಿ ಗಾಯಗಳಾಗಿವೆ. ಹೀಗಾಗಿ ಆಕೆಯ ಮೇಲೆ ಅತ್ಯಾಚಾರವಾಗಿದೆ ಅಂತ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೋಷಕರು ಬಾಲಕಿಯನ್ನು ಪ್ರಶ್ನಿಸಿದ್ದಾರೆ. ಆಗ ಬಾಲಕಿ ನೆರೆಮನೆಯ ಕೈಗಾಡಿ ಎಳೆಯುವ ವ್ಯಕ್ತಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬಾಯ್ಬಿಟ್ಟಿದ್ದಾಳೆ. ಸದ್ಯ ಬಾಲಕಿ ಗುಂಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಅಂತ ವೈದ್ಯರು ಹೇಳಿದ್ದಾರೆ.

ಪ್ರಕರಣ ಸಂಬಂಧ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದು, ಕೂಡಲೇ ಆತನನ್ನು ಬಂಧಿಸಲಾಗುವುದು ಅಂತ ಗುಂಟೂರು ಪೊಲೀಸ್ ಅಧೀಕ್ಷಕ ಅಪ್ಪಲ ನಾಯ್ಡು ಹೇಳಿದ್ದಾರೆ.

ಇತ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವುದನ್ನು ಖಂಡಿಸಿದ ಆಕೆಯ ಪೋಷಕರು ಹಾಗೂ ಸ್ಥಳೀಯರು ಹೆದ್ದಾರಿ ಬಂದ್ ಮಾಡಿ, ಟಯರ್ ಸುಡುವ ಮೂಲಕ ಮುಂಜಾನೆ 3 ಗಂಟೆಯವರೆಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಪ್ರಕರಣದ ಬಳಿಕ ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಿ, ನೇಣಿಗೇರಿಸುವಂತೆ ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಭಟನಾ ನಿರತವಾಗಿದ್ದ ತಂಡವೊಂದು ಆರೋಪಿಯ ಮಗನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಬಂದು ಆತನನ್ನು ಅಲ್ಲಿಂದ ಪಾರು ಮಾಡಿದ್ದಾರೆ ಎಂಬುದಾಗಿ ವರದಿಯಾಗಿದೆ.

Comments

Leave a Reply

Your email address will not be published. Required fields are marked *