ಡಿವೈಡರ್ ಗೆ ಡಿಕ್ಕಿಯಾಗಿ ಎದುರಿನ ಕಾರಿಗೆ ಅಪ್ಪಳಿಸಿದ ಕ್ಯಾಬ್: 9 ಜನರ ಸಾವು

ಹೈದರಾಬಾದ್: ಭೀಕರ ಅಪಘಾತವೊಂದರಲ್ಲಿ 9 ಜನರ ಸಾವನ್ನಪ್ಪಿರುವ ಘಟನೆ ತೆಲಂಗಾಣದ ವಣಪರ್ತಿ ಜಿಲ್ಲೆಯ ಕೊತ್ತಕೋಟ ತಾಲೂಕಿನ ಕಣಿಮೆಟ್ಟ ಗ್ರಾಮದಲ್ಲಿ ನಡೆದಿದೆ.

ಬುಧವಾರ ಬೆಳಗ್ಗೆ 8 ಗಂಟೆಗೆ ಈ ಅಪಘಾತ ನಡೆದಿದೆ. ಕರ್ನೂಲ್ ನಗರದಿದಂದ ಬರುತ್ತಿದ್ದ ಕ್ಯಾಬ್ ಕಣಿಮೆಟ್ಟ ಗ್ರಾಮದ ಬಳಿ ಡಿವೈಡರ್‍ಗೆ ಡಿಕ್ಕಿ ಹೊಡೆದು, ಎದುರುಗಡೆ ಬರ್ತಿದ್ದ ಮತ್ತೊಂದು ಕಾರಿಗೆ ಅಪ್ಪಳಿಸಿದೆ. ಕ್ಯಾಬ್ ಡ್ರೈವರ್ ನಿದ್ದೆಯ ಮಂಪರಿನಲ್ಲಿ ಇದ್ದಿದ್ದರಿಂದ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ 9 ಜನರು ಸಾವನ್ನಪ್ಪಿದ್ರೆ, ಇಬ್ಬರು ಬದುಕುಳಿದಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ಯಾಬ್ ನಲ್ಲಿಯ ತಾಂತ್ರಿಕ ದೋಷದಿಂದಾಗ ಅಪಘಾತ ನಡೆದಿದೆಯೇ ಎಂಬುದರ ಬಗ್ಗೆ ಮಾಹಿತಿ ನೀಡಲು ರಸ್ತೆ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ಗಾಯಾಳುಗಳು ಸಹ ಅಪಘಾತಕ್ಕೆ ಕಾರಣ ಏನು ಅಂತಾ ಸರಿಯಾದ ಮಾಹಿತಿಯನ್ನು ಇದೂವರೆಗೂ ನೀಡುತ್ತಿಲ್ಲ ಎಂದು ಕೊತ್ತಕೋಟ ಸಬ್ ಇನ್ಸ್ ಪೆಕ್ಟರ್ ರವಿ ಕುಮಾರ್ ತಿಳಿಸಿದ್ದಾರೆ.

ಅಪಘಾತದ ಒಂದು ಗಂಟೆಯ ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಎರಡು ವಾಹನಗಳಿಂದ 7 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನೂ ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಮೃತರೆಲ್ಲರನ್ನೂ ಹೈದರಾಬಾದ್, ವಣಪರ್ತಿ ಮತ್ತು ಕರ್ನೂಲ್ ಜಿಲ್ಲೆಯ ನಿವಾಸಿಗಳೆಂದು ಗುರುತಿಸಲಾಗಿದೆ.

ಕ್ಯಾಬ್ ನಲ್ಲಿ ಒಟ್ಟು ಆರು ಜನ ಪ್ರಯಾಣಿಸುತ್ತಿದ್ದರು. ಇನ್ನೊಂದು ವಾಹನದಲ್ಲಿದ್ದ ಬಂಗಾರಪೇಟೆಯ ಹೊರವಲಯದಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಕ್ಯಾಬ್‍ನಲ್ಲಿದ್ದವರನ್ನ ಅಜ್ಜಕೊಲ್ಲು ನಿವಾಸಿ ರಾಜು, ಮಸ್ತಪಿಯೂರ್ ನಿವಾಸಿ ಮಲ್ಲೇಶ್, ಬನ್ನಿಯ ನಿವಾಸಿಗಳಾದ ವೀರೇಶ್ ಹಾಗೂ ನರೇಶ್ ಎಂದು ಗುರುತಿಸಲಾಗಿದೆ. ಇನ್ನೊಂದು ವಾಹನದಲ್ಲಿದ್ದವರನ್ನು ಸೂರಿ ಬಾಬು, ಪತ್ನಿ ಸುನಿತಾ, ಮಗಳು ಪ್ರಸುನಾ ಮತ್ತು ಅತ್ತೆ ರಾಜೇಶ್ವರಿ ಎಂದು ಗುರುತಿಸಿದ್ದು, ಒಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಬ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

 

Comments

Leave a Reply

Your email address will not be published. Required fields are marked *