9 ತಿಂಗಳ ಮಗುವನ್ನ ಎಸೆದು ಕಟ್ಟಡದಿಂದ ಜಿಗಿದು ಮಹಿಳಾ ಟೆಕ್ಕಿ ಆತ್ಮಹತ್ಯೆ

– ಮೂರು ವರ್ಷದ ಹಿಂದೆಯಷ್ಟೇ ಮದ್ವೆ
– ಚಿನ್ನ, ಮನೆ, ಹಣ, ಭೂಮಿ ನೀಡಿದ್ರೂ ಸಾಕಾಗಿಲ್ಲ

ಹೈದರಾಬಾದ್: ತಾಯಿಯೊಬ್ಬಳು ತನ್ನ 9 ತಿಂಗಳ ಮಗುವನ್ನು ಐದು ಅಂತಸ್ತಿನ ಕಟ್ಟಡದಿಂದ ಎಸೆದು ಕೊಲೆ ಮಾಡಿದ್ದಾಳೆ. ನಂತರ ತಾನೂ ಕಟ್ಟಡದಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

ಗುಂಟೂರಿನಲ್ಲಿ ಶನಿವಾರ ಈ ಘಟನೆ ನಡೆದಿದೆ. ಮೃತಳನ್ನು ಮನೋಗ್ನಾ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಹೆಣ್ಣು ಮಗು ಸ್ಥಳದಲ್ಲೇ ಮೃತಪಟ್ಟರೆ, ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮೃತ ಮಹಿಳೆಯ ಕುಟುಂಬದವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಏನಿದು ಪ್ರಕರಣ?
ಮೂರು ವರ್ಷಗಳ ಹಿಂದೆ ಪ್ರಕಾಶಂ ಜಿಲ್ಲೆಯ ಪಂಗಲೂರು ಗ್ರಾಮದ ಮನೋಗ್ನಾ ಅದೇ ಜಿಲ್ಲೆಯ ನರ್ರಾ ಕಲ್ಯಾಣ್‍ಚಂದ್ರ ಜೊತೆ ಮದುವೆಯಾಗಿದ್ದಳು. ಈ ದಂಪತಿಗೆ ತುಳಸಿ ಎಂಬ ಒಂಬತ್ತು ತಿಂಗಳ ಹೆಣ್ಣು ಮಗುವಿದೆ. ಕಲ್ಯಾಣ್ ಚಂದ್ರ ನೌಕಾಪಡೆಯ ಖಾಸಗಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದು, ಮನೋಗ್ನಾ ಹೈದರಾಬಾದ್‍ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು.

ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದ ಸಂದರ್ಭದಲ್ಲಿ ಪತಿ ಕಲ್ಯಾಣ್ ತನ್ನ ಪೋಷಕರೊಂದಿಗೆ ಗುಂಟೂರಿನ ಲಕ್ಷ್ಮಿಪುರಂ ಕಮಲೇಶ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ. ಆದರೆ ಶನಿವಾರ ಮನೋಗ್ನಾ ಮೊದಲು ಮಗಳನ್ನು ಐದು ಅಂತಸ್ತಿನ ಕಟ್ಟಡದಿಂದ ಎಸೆದಿದ್ದು, ನಂತರ ತಾನೂ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದಾರೆ ಎಂದು ಸಬ್‌-ಇನ್ಸ್‌ಪೆಕ್ಟರ್ ಸತ್ಯನಾರಾಯಣ ತಿಳಿಸಿದ್ದಾರೆ.

ವಿವಾಹದ ಸಮಯದಲ್ಲಿ ಮೃತ ಮನೋಗ್ನಾಗೆ 50 ಗ್ರಾಂ ಚಿನ್ನ, ಐದು ಗುಂಟೆ ಭೂಮಿ, 2 ಲಕ್ಷ ರೂ. ನಗದು ಮತ್ತು ವರದಕ್ಷಿಣೆ ರೂಪದಲ್ಲಿ ಮನೆಯನ್ನು ಕೂಡ ನೀಡಲಾಗಿತ್ತು ಎಂದು ತಿಳಿದುಬಂದಿದೆ. ವರದಕ್ಷಿಣೆಗಾಗಿ ನನ್ನ ಮಗಳಿಗೆ ಪತಿ ಮತ್ತು ಅತ್ತೆ-ಮಾವ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಪತಿ ಮತ್ತು ಅತ್ತೆ-ಮಾವನ ಕಿರುಕುಳವನ್ನು ಸಹಿಸಲಾಗದೆ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮನೋಗ್ನಾ ಪೋಷಕರು ಆರೋಪಿಸಿದ್ದಾರೆ.

ಸದ್ಯಕ್ಕೆ ಮೃತಳ ಪೋಷಕರು ನೀಡಿದ ದೂರಿನ ಅನ್ವಯ ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *