80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ- ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ

ನವದೆಹಲಿ: ಕೊರೊನಾ 2ನೇ ಅಲೆಯಿಂದ ನಲುಗುತ್ತಿರುವ ಬಡ ಜನರಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದ್ದು, 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ನೀಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಶುಕ್ರವಾರ ಈ ಕುರಿತು ಘೋಷಣೆ ಮಾಡಿರುವ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಮೇ ಹಾಗೂ ಜೂನ್ 2 ತಿಂಗಳು ಉಚಿತ ಆಹಾರ ಧಾನ್ಯ ನೀಡುವುದಾಗಿ ತಿಳಿಸಿದೆ. ಒಟ್ಟು 80 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ.ಉಚಿತ ಆಹಾರ ಧಾನ್ಯ ನೀಡುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯದ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.

ಉಚಿತ ಆಹಾರ ಧಾನ್ಯ ವಿತರಣೆಗಾಗಿ ಕೇಂದ್ರ ಸರ್ಕಾರ 26 ಸಾವಿರ ಕೋಟಿಗೂ ಅಧಿಕ ಹಣವನ್ನು ವ್ಯಯಿಸುತ್ತಿದ್ದು, 80 ಲಕ್ಷ ಟನ್ ಆಹಾರ ಧಾನ್ಯ ವಿತರಿಸುತ್ತಿದೆ. ಕೊರೊನಾ ಎರಡನೇ ಅಲೆ ಹಿನ್ನೆಲೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಈ ಘೋಷಣೆ ಮಾಡಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ನಾಗರಿಕ ಸರಬರಾಜು ಯೋಜನೆಯ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆ.ಜಿ.ಆಹಾರ ಧಾನ್ಯಗಳನ್ನು 2 ತಿಂಗಳು ವಿತರಿಸಲಾಗುವುದು. ಆದರೆ ಈ ಬಾರಿ ನಾವು ಬೇಳೆ ಕಾಳುಗಳನ್ನು ನೀಡುವುದಿಲ್ಲ ಎಂದು ಸುಧಾಂಶು ಪಾಂಡೆ ತಿಳಿಸಿದ್ದಾರೆ.

ದೇಶದಲ್ಲಿ ಕೊರೊನಾ ಸಾರ್ವಕಾಲಿಕ ದಾಖಲೆಯ ಕೇಸ್‍ಗಳು ಪತ್ತೆಯಾಗುತ್ತಿದ್ದು, ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ದೇಶದಲ್ಲಿ ಶುಕ್ರವಾರ ಒಂದೇ ದಿನ 3.32 ಲಕ್ಷ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಈ ಹಿಂದೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್‍ಎಫ್‍ಎಸ್‍ಎ) ಅಡಿಯಲ್ಲಿ ನೋಂದಾಯಿತ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು 5 ಕೆ.ಜಿ ಅಕ್ಕಿ, ಗೋಧಿಯ ಜೊತೆಗೆ 1 ಕೆ.ಜಿ. ಬೇಳೆ ಕಾಳು ನೀಡಲಾಗುತ್ತಿತ್ತು. ಆದರೆ ಈ ಬಾರಿ ಬೇಳೆ ಕಾಳುಗಳನ್ನು ವಿತರಿಸುವುದಿಲ್ಲ ಎಂದು ಸುಧಾಂಶು ಪಾಂಡೆ ತಿಳಿಸಿದ್ದಾರೆ.

2020ರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಘೋಷಿಸಲಾಗಿದ್ದು, ಈ ಯೋಜನೆಯಡಿ 3 ತಿಂಗಳುಗಳ ಕಾಲ 2020ರ ಜುಲೈವರೆಗೆ ಬಡವರಿಗೆ ಉಚಿತ ಆಹಾರ ಧಾನ್ಯ ವಿತರಿಸಲಾಗಿತ್ತು. ಕೋವಿಡ್‍ನಿಂದಾಗಿ ಈ ಯೋಜನೆಯನ್ನು ನವೆಂಬರ್ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಜಾರಿಗೆ ತರಲಾಗುತ್ತಿದೆ.

Comments

Leave a Reply

Your email address will not be published. Required fields are marked *