8ರ ಬಾಲಕಿ ಮೇಲೆ 6ನೇ ತರಗತಿ ವಿದ್ಯಾರ್ಥಿ ಸೇರಿ ಮೂವರಿಂದ ಗ್ಯಾಂಗ್ ರೇಪ್

ಲಕ್ನೋ: 8 ವರ್ಷದ ಬಾಲಕಿ ಮೇಲೆ 6ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಹಾಗೂ ಆತನ ಇಬ್ಬರು ಸಹೋದರರು ಸೇರಿ ಅತ್ಯಾಚಾರ ಮಾಡಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಬಾಗ್ಪಾಟ್ ಪ್ರದೇಶದ ರಾಮಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ 6ನೇ ತರಗತಿ ವಿದ್ಯಾರ್ಥಿ ಹಾಗೂ ಆತನ ಸಹೋದರರು ಸೇರಿ, 3ನೇ ತರಗತಿ ಬಾಲಕಿ ಮೇಲೆ ಶಾಲೆಯ ಶೌಚಾಲಯದಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಈ ಸಂಬಂಧ ಬಾಲಕಿಯ ತಂದೆ ಆರೋಪಿಗಳ ವಿರುದ್ಧ ದೂರು ನೀಡಲು ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿದ್ದರು. ಆದರೆ ಅಲ್ಲಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲು ಪೊಲೀಸರು 15 ದಿನಗಳ ಕಾಲ ನಿರಾಕರಿಸಿದ್ದರು. ಹಾಗೆಯೇ ಸ್ಟೇಷನ್ ಹೌಸ್ ಅಧಿಕಾರಿಯನ್ನು ಕೂಡ ಈ ಪ್ರಕರಣವನ್ನು ಕೈಬಿಡುವಂತೆ ಬಾಲಕಿಯ ತಂದೆಗೆ ಒತ್ತಾಯಿಸಿದ್ದರು ಎನ್ನಲಾಗಿದೆ.

ಸೋಮವಾರದಂದು ಬಾಲಕಿ ಆರೋಗ್ಯದಲ್ಲಿ ಏರುಪೇರಾದಾಗ ಈ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಬೇಜವಾಬ್ಧಾರಿ ಮೆರೆದ ಸ್ಟೇಷನ್ ಹೌಸ್ ಅಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಿದ್ದಾರೆ. ಸದ್ಯ ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಬಾಗ್ಪತ್ ಎಸ್‍ಪಿ ಪ್ರತಾಪ್ ಗೋಪೇಂದ್ರ ಯಾದವ್ ಮಾತನಾಡಿ, ಘಟನೆ 6ನೇ ತರಗತಿಯ ಓದುತ್ತಿರುವ ವಿದ್ಯಾರ್ಥಿಯ ಅಣ್ಣ ಈ ಕೃತ್ಯವೆಸೆಗಿದ್ದಾನೆ ಎನ್ನಲಾಗಿದೆ. ಆದರೆ ಬಾಲಕಿಯ ತಂದೆ ವಿದ್ಯಾರ್ಥಿ ಜೊತೆಗೆ ಅವನ ಇನ್ನಿಬ್ಬರು ಸಹೋದರರ ಹೆಸರನ್ನೂ ಕೂಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ತನಿಖೆ ನಂತರವೇ ನಿಜಾಂಶ ತಿಳಿಯಲಿದೆ ಎಂದು ಹೇಳಿದರು.

ಸದ್ಯ ಈ ಸಂಬಂಧ ಮೂವರು ಆರೋಪಿಗಳ ವಿರುದ್ಧವೂ ಐಪಿಸಿ ಸೆಕ್ಷನ್ 376ರ(ಅತ್ಯಾಚಾರ) ಅಡಿಯಲ್ಲಿ ಹಾಗೂ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಮಂಗಳವಾರದಂದು ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಒಮ್ಮೆ ಬಾಲಕಿ ಚೇತರಿಸಿಕೊಂಡ ಬಳಿಕ ಆಕೆಯ ಹೇಳಿಕೆ ಪಡೆದು, ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಎಸ್‍ಪಿ ತಿಳಿಸಿದರು.

Comments

Leave a Reply

Your email address will not be published. Required fields are marked *