30 ಅಡಿ ಕಂದಕಕ್ಕೆ ಉರುಳಿದ ವ್ಯಾನ್ – 8 ಮಹಿಳೆಯರು ಸಾವು, 29 ಮಂದಿಗೆ ಗಾಯ

ಮುಂಬೈ: ವಾಹನವೊಂದು 30 ಅಡಿ ಕಂದಕಕ್ಕೆ ಉರುಳಿದ ಪರಿಣಾಮ 8 ಜನ ಮಹಿಳೆಯರು ಸಾವನ್ನಪ್ಪಿ, 29 ಜನ ಗಾಯಗೊಂಡ ದಾರುಣ ಘಟನೆ ಪುಣೆಯಲ್ಲಿ ನಡೆದಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 40 ಪ್ರಯಾಣಿಕರು‌ ವ್ಯಾನ್‌ನಲ್ಲಿದ್ದರು. ಇವರೆಲ್ಲ ಖೇಡ್ ತಹಸಿಲ್‌ನಲ್ಲಿರುವ ಶ್ರೀ ಕ್ಷೇತ್ರ ಮಹಾದೇವ ಕುಂದೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಮೃತರು ಹಾಗೂ ಗಾಯಾಳುಗಳು ಪಾಪಲ್ವಾಡಿ ಗ್ರಾಮದವರಾಗಿದ್ದಾರೆ. ಶ್ರಾವಣ ಮಾಸದ ಶುಭ ಸೋಮವಾರದ ಪೂಜೆಗಾಗಿ ಅವರು ದೇವಾಲಯಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ PMNRF ನಿಧಿಯಿಂದ 2 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.