ಮೆಟ್ರೋ ನಿಲ್ದಾಣವೇ ಟಾರ್ಗೆಟ್‌ – ಇಲ್ಲಿಯವರೆಗೆ ರಷ್ಯಾ, ಉಕ್ರೇನ್‌ಗೆ ಆದ ನಷ್ಟ ಎಷ್ಟು?

ಕೀವ್‌: ಉಕ್ರೇನ್ ಮೇಲೆ ರಷ್ಯಾ ಪಡೆಗಳು ರಣಹದ್ದುಗಳಂತೆ ಮುಗಿಬಿದ್ದು ಭಾರೀ ವಿಧ್ವಂಸ ಸೃಷ್ಟಿಸುತ್ತಿವೆ. ಎರಡು ದಿನಗಳಿಂದ ಭಾರೀ ದಾಳಿ ನಡೆಯುತ್ತಿದ್ದು, ರಷ್ಯಾ-ಉಕ್ರೇನ್ ಸೈನಿಕರ ಜೊತೆಗೆ ನಾಗರೀಕರ ಅಪಾರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.

ಪ್ರಧಾನ ನಗರಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಪಡೆಗಳು ದಾಳಿ ಮುಂದುವರೆಸಿವೆ. ಸರ್ಕಾರಿ ಆಸ್ತಿಗಳು, ಕಚೇರಿಗಳ ಜೊತೆ ಜೊತೆಗೆ ಈಗ ಪೌರರನ್ನು ಗುರಿಯಾಗಿಸಿಕೊಂಡು ವಿಧ್ವಂಸಕಾಂಡ ಸೃಷ್ಟಿಸ್ತಿದೆ. ಆಸ್ಪತ್ರೆಗಳು, ಶಾಲೆಗಳನ್ನು ಉಡೀಸ್ ಮಾಡುತ್ತಿದೆ.

ಅಷ್ಟೇ ಅಲ್ಲದೇ 8ನೇ ದಿನವಾದ ಇಂದು ಮೆಟ್ರೋ ಸುರಂಗ ಮಾರ್ಗಗಳಲ್ಲಿ ಆಶ್ರಯ ಪಡೆದಿರುವವರನ್ನು ಟಾರ್ಗೆಟ್ ಮಾಡಿದೆ. ಕೀವ್ ಮೆಟ್ರೋ ಸ್ಟೇಷನ್ ಸಮೀಪ ಸೇರಿ ನಗರದ ಹಲವೆಡೆ ಭಾರೀ ಸ್ಫೋಟ ಸಂಭವಿಸಿವೆ. ಇದನ್ನೂ ಓದಿ: ಒಲಿಂಪಿಕ್ಸ್ ಮುಗಿಯುವವರೆಗೆ ಯುದ್ಧವನ್ನು ಮುಂದೆ ಹಾಕಿ ಎಂದಿದ್ದ ಚೀನಾ!

ಡ್ರುಬಿ ನರೋದಿವ್ ಮೆಟ್ರೋ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆದು, ಅಪಾರ ಹಾನಿ ಸಂಭವಿಸಿದೆ. ಚೆರ್ನಿಹೀವ್‍ನಲ್ಲಿ ತೈಲಗಾರಗಳನ್ನು ಸ್ಫೋಟಿಸಲಾಗಿದೆ. ಖಾರ್ಕೀವ್ ನಗರದ ಮೇಲೆ ಈಗಲೂ ದಾಳಿ ಮುಂದುವರೆದಿದ್ದು, ಇಡೀ ನಗರ ಸ್ಮಶಾನ ಸದೃಶವಾಗಿದೆ.

ಕೆಲವೆಡೆ ರಷ್ಯಾ ಪಡೆಗಳು, ನಾಗರಿಕರನ್ನು ನೇರವಾಗಿ ಗುಂಡಿಟ್ಟು ಕೊಲ್ಲುತ್ತಿವೆ. ಜನಭಯಭೀತರಾಗಿದ್ದಾರೆ. ಒಬ್ಲಾಸ್ಟ್, ಬಲಾಕ್ಲಿಯಾ, ಲವಿವ್, ಮೈಕೋಲಿವ್ ನಗರಗಳ ಮೇಲೆಯೂ ದಾಳಿಗಳು ಆರಂಭವಾಗಿವೆ. ಕೀವ್ ತೊರೆಯುತ್ತಿರುವ ಪೌರರಿಗೆ ರಷ್ಯಾ ಸೇನೆ ಅಡ್ಡಿಪಡಿಸುತ್ತಿಲ್ಲ ಎನ್ನಲಾಗಿದೆ. ಈವರೆಗೂ 10ಲಕ್ಷಕ್ಕೂ ಹೆಚ್ಚು ಮಂದಿ ಉಟ್ಟಬಟ್ಟೆಯಲ್ಲಿ ಉಕ್ರೇನ್ ತೊರೆದಿದ್ದಾರೆ ಎಂದು ವರದಿಯಾಗಿದೆ.

ಉಕ್ರೇನ್‌ ತಿರುಗೇಟು:
ರಷ್ಯಾ ಸೇನೆಗೆ ಪ್ರತಿಯಾಗಿ ಉಕ್ರೇನ್ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ರಷ್ಯಾದ ಸುಖೋಯ್ ಎಸ್-30 ಯುದ್ಧ ವಿಮಾನವನ್ನು ಉಕ್ರೇನ್ ಹೊಡೆದುರುಳಿಸಿದೆ. ಜಪೋರಿಷಿಯಾ ಅಣು ಸ್ಥಾವರಕ್ಕೆ ನುಗ್ಗದಂತೆ ರಷ್ಯಾ ಸೇನೆಯನ್ನು ಜನರೇ ತಡೆದಿದ್ದಾರೆ. ಟೈರ್‌, ಲಾರಿ ಅಡ್ಡ ನಿಲ್ಲಿಸಿ ಹೋರಾಟ ಮಾಡ್ತಿದ್ದಾರೆ.

ಎರಡೂ ಕಡೆಯೂ ಅಪಾರ ನಷ್ಟ ಸಂಭವಿಸಿದೆ. ಉಕ್ರೇನ್‍ಗೆ ಆದ ನಷ್ಟವನ್ನೇ ಮುಂದಿನ ದಿನಗಳಲ್ಲಿ ರಷ್ಯಾ ದೇಶವೇ ತುಂಬಿಕೊಡಬೇಕು ಹಾಗೇ ಮಾಡುತ್ತೇವೆ ಎಂದು ಅಧ್ಯಕ್ಷ ಝೆಲೆನ್‍ಸ್ಕಿ ಗುಡುಗಿದ್ದಾರೆ. ಯುದ್ಧದ ನಂತರ ಉಕ್ರೇನ್ ದೇಶವನ್ನು ಪುನರ್ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

ಉಕ್ರೇನ್‍ಗೆ ಆದ ನಷ್ಟ ಎಷ್ಟು?
2870 ಸೈನಿಕರು ಮೃತಪಟ್ಟಿದ್ದಾರೆ ಎಂದು ರಷ್ಯಾ ಹೇಳಿದ್ದರೆ 2 ಸಾವಿರಕ್ಕೂ ಹೆಚ್ಚು ಪೌರರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ ಹೇಳಿದೆ.

ರಷ್ಯಾಗೆ ಆದ ನಷ್ಟ ಎಷ್ಟು?
ಉಕ್ರೇನ್ ಪ್ರಕಾರ 9000 ಯೋಧರು ಸಾವನ್ನಪ್ಪಿದ್ದರೆ. 30 ಯುದ್ಧ ವಿಮಾನ, 42 ಎಂಎಲ್‍ಆರ್‌ಎಸ್ ಕ್ಷಿಪಣಿ, 31 ಹೆಲಿಕಾಪ್ಟರ್, 217 ಯುದ್ಧ ಟ್ಯಾಂಕ್ ಧ್ವಂಸವಾಗಿದೆ. ರಷ್ಯಾ ತನ್ನ ಕಡೆ 498 ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

Comments

Leave a Reply

Your email address will not be published. Required fields are marked *