8 ಸಿಕ್ಸರ್ ಸಿಡಿಸಿ ಟಿ-20 ಇತಿಹಾಸದಲ್ಲಿ ದಾಖಲೆ ಬರೆದ ಗೇಲ್

ಅಬುಧಾಬಿ: ಇಂದು ನಡೆಯುತ್ತಿರುವ ಐಪಿಎಲ್-2020ಯ 50ನೇ ಪಂದ್ಯದಲ್ಲಿ ಎಂಟು ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ ಅವರು ಟಿ-20 ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.

ಇಂದು ಅಬುಧಾಬಿ ಮೈದಾನದಲ್ಲಿ ನಡೆಯುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತ ಪಂಜಾಬ್ ತಂಡ ಮೊದಲು ಬ್ಯಾಟ್ ಮಾಡಿದೆ. ಈ ಪಂದ್ಯದಲ್ಲಿ ಇಂದು ಅದ್ಭುತವಾಗಿ ಬ್ಯಾಟ್ ಬೀಸಿದ ಪಂಜಾಬ್ ಆಟಗಾರ ಕ್ರಿಸ್ ಗೇಲ್ ಚುಟುಕು ಮಾದರಿಯ ಕ್ರಿಕೆಟಿನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಕ್ರಿಸ್ ಗೇಲ್ ಅವರು ಟಿ-20 ಮಾದರಿಯ ಕ್ರಿಕೆಟ್‍ಗೆ ಹೇಳಿ ಮಾಡಿಸಿದಂತ ಬ್ಯಾಟ್ಸ್‍ಮ್ಯಾನ್ ಆಗಿದ್ದಾರೆ. ಹೊಡಿಬಡಿ ಆಟಕ್ಕೆ ಹೊಂದಿಕೊಳ್ಳುವಂತೆ ಬ್ಯಾಟ್ ಬೀಸುವ ಗೇಲ್ ಸಿಕ್ಸರ್ ಸಿಡಿಸುವುದರಲ್ಲಿ ನಿಸ್ಸೀಮರು. ಈಗ ಟಿ-20ಯಲ್ಲಿ ಮೊದಲ ಬಾರಿಗೆ 1 ಸಾವಿರ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಗೇಲ್ ಪಾತ್ರರಾಗಿದ್ದಾರೆ. ಇಂದಿನ ಪಂದ್ಯದಲ್ಲಿ ಅವರು ಬರೋಬ್ಬರಿ ಎಂಟು ಸಿಕ್ಸ್ ಸಿಡಿಸಿದರು.

ಇಂದಿನ ಪಂದ್ಯದಲ್ಲಿ ಎರಡನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಗೇಲ್ ಅವರು, 63 ಎಸೆತದಲ್ಲಿ ಆರು ಬೌಂಡರಿ ಮತ್ತು ಎಂಟು ಭರ್ಜರಿ ಸಿಕ್ಸರ್ ಸಮೇತ ಬರೋಬ್ಬರಿ 99 ರನ್ ಬಾರಿರಿಸಿ ಔಟ್ ಆದರು. ಈ ಮೂಲಕ ಟಿ-20ಯಲ್ಲಿ ಸಾವಿರ ಸಿಕ್ಸರ್ ಸಿಡಿಸಿದರು. ವೆಸ್ಟ್ ಇಂಡೀಸ್ ಪರ ಅಂತಾರಾಷ್ಟ್ರೀಯ ಟಿ-20 ಪಂದ್ಯ, ಐಪಿಎಲ್ ಮತ್ತು ಬಿಗ್ ಬ್ಯಾಷ್ ಸೇರಿದಂತೆ ಗೇಲ್ ಹಲವಾರು ಟಿ-20 ಟೂರ್ನಿಗಳನ್ನು ಆಡಿದ್ದಾರೆ.

ಈ ಎಲ್ಲ ಪಂದ್ಯಗಳಿಂದ ಕೇವಲ ಟಿ-20 ಪಂದ್ಯಗಳಲ್ಲೇ 10 ಸಾವಿರ ರನ್ ಸಿಡಿಸಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ 349 ಸಿಕ್ಸ್ ಮತ್ತು 4760 ರನ್ ಬಾರಿಸಿದ್ದಾರೆ. ಜೊತೆಗೆ ಅತೀ ಹೆಚ್ಚು ಸೆಂಚುರಿ (6) ಮತ್ತು ಅತೀ ಹೆಚ್ಚು ವೈಯಕ್ತಿಕ ರನ್(175) ಹೊಡೆದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

Comments

Leave a Reply

Your email address will not be published. Required fields are marked *