8 ವರ್ಷಗಳೇ ಕಳೆದ್ರೂ ಈಡೇರಲಿಲ್ಲ ಕನಸು- ಲಾಕ್‍ಡೌನ್ ವೇಳೆ ಮಾದರಿಯಾದ ಅನ್ನದಾತರು!

ಧಾರವಾಡ: ಮನಸ್ಸಿದ್ದರೆ ಮಾರ್ಗ ಅಂತಾರೆ. ಜನ ಮನಸ್ಸು ಮಾಡಿದ್ರೆ ಏನೆಲ್ಲಾ ಮಾಡಬಹುದು ಅನ್ನೋದಕ್ಕೆ ಇಲ್ಲಿಯ ಜನರೇ ಸಾಕ್ಷಿ. ಕಳೆದ 8 ವರ್ಷಗಳಿಂದ ಸರ್ಕಾರದ ಎದುರು ಮಂಡಿಯೂರಿ ಕೇಳಿದ್ರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಇದೀಗ ತಾವೇ ಮುಂದೆ ನಿಂತು ಆ ಕೆಲಸ ಮಾಡಿ ಸಾಧಿಸಿದ್ದಾರೆ.

ಹೌದು. ಇದು ಧಾರವಾಡ ಹೊರವಲಯದ ಲಕಮನಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತಲಿನ ಜನರ ಶ್ರಮಾದಾನದ ಕಥೆ. ಕೆರೆ ನಿರ್ಮಾಣಕ್ಕೆ 8 ವರ್ಷಗಳಿಂದ ಮನವಿ ಮಾಡಿದ್ರೂ ಅಧಿಕಾರಿಗಳು, ಜನಪ್ರತಿನಿಧಿಗಳು ಡೋಂಟ್‍ಕೇರ್ ಎಂದಿದ್ದರು. ಇದೇ ವೇಳೆ ಕೊರೊನಾದಿಂದಾಗಿ ಲಾಕ್‍ಡೌನ್ ಘೋಷಣೆಯಾಯ್ತು. ಇದನ್ನೇ ಜನ ಉಪಯೋಗಿಸಿ ಮಾದರಿಯಾಗಿದ್ದಾರೆ. ಲಾಕ್‍ಡೌನ್ ವೇಳೆ ಶಾಖಾಂಬರಿ ನಗರ, ನಂದಿನಿಲೇಔಟ್ ಹಾಗೂ ಗುರುದೇವ ನಗರದ ಜನ ನಾವೇ ಯಾಕೆ ಕೆರೆ ನಿರ್ಮಾಣ ಮಾಡಬಾರದು ಅಂತ ಮನಸ್ಸು ಮಾಡಿದರು. ಸುಮಾರು 3.5 ಲಕ್ಷ ರೂ.ಗಳನ್ನು ಬಡಾವಣೆ ಜನರಿಂದ ಸಂಗ್ರಹಿಸಿ ಕೆಲವರು ಹಣದ ಜೊತೆ ಶ್ರಮಾದಾನ ಮಾಡಿದ್ರೆ, ಕೆಲವರು ಹಣ ಕೊಟ್ಟು ಸಹಕರಿಸಿದ್ರು.

ಈ ಹಿಂದೆ ಈ ಜಾಗವನ್ನ ರಿಯಲ್ ಎಸ್ಟೆಟ್ ಮಾಡೋರು ಒತ್ತುವರಿ ಮಾಡಿಕೊಂಡು ಫ್ಲ್ಯಾಟ್ ಮಾಡಲು ಮುಂದಾಗಿದ್ದರು. ಆದರೆ ಇಲ್ಲಿಯ ಜನರು ಅವರಿಂದ ಈ ಕೆರೆಯನ್ನ ಉಳಿಸುವಲ್ಲಿ ಕೂಡ ಸಫಲರಾದ್ರು. ಅಲ್ಲದೇ ಬಡಾವಣೆಯ ಪ್ರತಿಯೊಬ್ಬರೂ ಸೇರಿ ಕೆರೆ ಪಕ್ಕದಲ್ಲಿ ಅರಣ್ಯ ಇಲಾಖೆಯಿಂದ ಸಸಿಗಳನ್ನು ತಂದು ನೆಟ್ಟಿದ್ದಾರೆ. ಕೆರೆ ಏರಿ ಮೇಲೆ ಹಿರಿಯ ನಾಗರಿಕರು ಕೂರುವುದಕ್ಕೆ ಬೆಂಚ್ ನಿರ್ಮಾಣ ಮಾಡಿದ್ದಾರೆ.

ಕೆರೆ ಒತ್ತುವರಿ ಮಾಡಿದವರನ್ನ ಬಿಡಿಸಿ ಒಂದು ಕರೆ ನಿರ್ಮಾಣ ಮಾಡಲು ಲಾಕ್‍ಡೌನ್ ಕೂಡಾ ಕಾರಣವಾಯ್ತು. ಅಲ್ಲದೇ ಈ ಬಡಾವಣೆಯ ಜನರ ಹಲವು ದಿನಗಳ ಕನಸು ನನಸು ಆಗಲು ಕೂಡ ಕಾರಣ ಆಯ್ತು.

Comments

Leave a Reply

Your email address will not be published. Required fields are marked *