ಗಾಂಜಾ ತುಂಬಿದ್ದ 8 ಸಿಗರೇಟ್‌ ಪತ್ತೆ – ಪೊಲೀಸರ ದಾಳಿ ವೇಳೆ ರಾಗಿಣಿ ಮನೆಯಲ್ಲಿ ಏನೇನು ಸಿಕ್ಕಿದೆ?

ಬೆಂಗಳೂರು: ಡ್ರಗ್ಸ್‌ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದರೂ ಕುಂಟು ನೆಪ ಹೇಳಿದ್ದ ರಾಗಿಣಿ ಇಂದು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

ಬುಧವಾರ ಸಿಸಿಬಿ ನೋಟಿಸ್‌ ಕೊಟ್ಟಿದ್ದರೂ ವಿಚಾರಣೆಗೆ ಹಾಜರಾಗದೇ ಕುಂಟು ನೆಪ ಹೇಳಿ ಗುರುವಾರ ಇಡೀ ದಿನ ಮನೆಯಲ್ಲಿ ಇಲ್ಲದೇ ಹೊರಗೆ ಹೋಗಿದ್ದ ನಟಿ ರಾಗಿಣಿ ದ್ವಿವೇದಿ, ತಮ್ಮ ಯಲಹಂಕದ ಫ್ಲ್ಯಾಟ್‌ಗೆ ಮಧ್ಯರಾತ್ರಿ 12 ಗಂಟೆಯ ವೇಳೆಗೆ ವಾಪಸ್ ಆಗಿದ್ದರು.

ಗುರುವಾರ ಇಡಿ ದಿನ ಸಿಸಿಬಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಹಲವು ಪ್ರಭಾವಿಗಳನ್ನು ಮತ್ತು ವಕೀಲರನ್ನು ರಾಗಿಣಿ ಭೇಟಿ ಮಾಡಿದ್ದರು. ರಾಗಿಣಿಯ ಈ ನಡೆಯ ಇಂಚಿಂಚೂ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಪೊಲೀಸರು ಕೋರ್ಟ್‌ ಸರ್ಚ್ ವಾರೆಂಟ್ ಜೊತೆಗೆ ಬೆಳ್ಳಂಬೆಳಗ್ಗೆ ಅವರ ಮನೆಯ ಬಾಗಿಲು ತಟ್ಟಿದ್ದರು. ಇದನ್ನೂ ಓದಿ: ಎಷ್ಟು ವಿಚಾರಣೆ ಮಾಡ್ತೀರಿ? ಬೇಗ ಕಳುಹಿಸಿ – ಅಧಿಕಾರಿಯ ಮೇಲೆ ಪ್ರಭಾವಿ ರಾಜಕಾರಣಿ ಒತ್ತಡ

ಬೆಳಗ್ಗೆ 6:30ರ ವೇಳೆ ಎರಡು ಕಾರಿನಲ್ಲಿ ಬಂದ ಸಿಸಿಬಿ ಪೊಲೀಸರು ಡೋರ್ ಬೆಲ್ ಮಾಡಿ ಸೀದಾ ಒಳನುಗ್ಗಿದ್ದಾರೆ. ಸಿಸಿಬಿ ಪೊಲಿಸರ ರೇಡ್ ಕಂಡು ಶಾಕ್‍ಗೆ ಒಳಗಾದ ರಾಗಿಣಿ, ನಮ್ಮ ಮನೆ ಮೇಲೆ ಏಕೆ ರೇಡ್ ಮಾಡಿದ್ದೀರಿ ಎಂದು ಗರಂ ಆಗಿದ್ದಾರೆ.

ಈ ವೇಳೆ ಸರ್ಚ್ ವಾರೆಂಟ್ ತೋರಿಸಿ ಎಲ್ಲರ ಮೊಬೈಲ್ ವಶಕ್ಕೆ ಪಡೆದ ಪೊಲೀಸರು ಎಲ್ಲರನ್ನು ಒಂದು ಕಡೆ ಕೂರಿಸಿ ರಾಗಿಣಿ ಮನೆಯಲ್ಲಿ ಶೋಧ ಕಾರ್ಯ ಮಾಡತೊಡಗಿದರು.

ಇಡೀ ಮನೆಯನ್ನು ನಾಲ್ಕು ಗಂಟೆಗಳ ಕಾಲ ಶೋಧಿಸಿದ ಸಿಸಿಬಿ ಪೊಲೀಸರು ದಿಂಬು, ಹೂ ಕುಂಡ, ಬಾಲ್ಕನಿ, ಕಾರು..ಹೀಗೆ ಎಲ್ಲಾ ಕಡೆ ಶೋಧ ನಡೆಸಿದ್ದಾರೆ. ಈ ವೇಳೆ ಸಿಗರೇಟ್‍ನಲ್ಲಿ ತುಂಬಿಟ್ಟಿದ್ದ ಡ್ರಗ್ಸ್, ನಾಲ್ಕು ಮೊಬೈಲ್, ಎರಡು ಲ್ಯಾಪ್‍ಟಾಪ್, ಮದ್ಯದ ಬಾಟಲಿಯನ್ನು ವಶಕ್ಕೆ ಪಡೆದಿದ್ದಾರೆ.

ಎರಡು ಮೊಬೈಲ್‍ಗಳಲ್ಲಿ ವಾಟ್ಸಪ್ ನೋಡುವಾಗ ಚಾಟ್‌ ಡಿಲೀಟ್‌ ಮಾಡಿರುವುದು ಗೊತ್ತಾಗಿದೆ. ಡಿಲೀಟ್‌ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಅಪರಿಚಿತ ವ್ಯಕ್ತಿಗಳಿಂದ ಸಂದೇಶ ಹೆಚ್ಚಾದ ಕಾರಣ, ಎಲ್ಲಾ ಡಿಲೀಟ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಅನನ್ಯ ಅಪಾರ್ಟ್‍ಮೆಂಟ್‍ನಲ್ಲಿರುವ ಮತ್ತೊಂದು ಫ್ಲಾಟ್‍ನಲ್ಲಿ ಶೋಧ ಕಾರ್ಯ ನಡೆಸಿದ ಬಳಿಕ ನಾಲ್ಕು ಗಂಟೆಯ ಬಳಿಕ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶೋಧ ಕಾರ್ಯದ ವೇಳೆ 8 ಗಾಂಜಾ ತುಂಬಿದ ಸಿಗರೇಟ್ ಪತ್ತೆಯಾಗಿದೆ. ಆದರೆ ಇದರಲ್ಲಿ ಬೇರೆ ಮಾದರಿಯ ಡ್ರಗ್ಸ್ ಮಿಶ್ರಣವಾದ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ. ಹೀಗಾಗಿ ಇದರ ಒಳಗಡೆ ನಿಜವಾಗಿ ಇರುವುದು ಏನು ಎಂಬುದನ್ನು ತಿಳಿಯಲು ಸಿಗರೇಟ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇಷ್ಟೇ ಅಲ್ಲದೇ ಮನೆ ದಾಳಿಯ ವೇಳೆ ಸಾಕಷ್ಟು ಮಹತ್ವದ ದಾಖಲೆಗಳು ಸಿಕ್ಕಿರುವ ವಿಚಾರ ಪೊಲೀಸ್‌ ಮೂಲಗಳಿಂದ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *