75 ಲಕ್ಷ ಹಣ ಕಳ್ಕೊಂಡಿದ್ದ ಕಥೆ ಬಿಚ್ಚಿಟ್ಟ ಜಗ್ಗೇಶ್

ಬೆಂಗಳೂರು: ಸ್ಯಾಂಡಲ್‍ವುಡ್‍ನ ನವರಸ ನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇದೀಗ ಜಗ್ಗೇಶ್ ತಮ್ಮ ಸಿನಿ ಬದುಕಿನಲ್ಲಿ 75 ಲಕ್ಷ ಹಣ ಕಳೆದುಕೊಂಡಿರುವ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ.

ಜಗ್ಗೇಶ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ‘ಮೇಕಪ್’ ಸಿನಿಮಾ ಬಿಡುಗಡೆಯಾಗಿದ್ದ ಸಂದರ್ಭದ ಜಾಹೀರಾತುಗಳನ್ನು ಹಂಚಿಕೊಂಡಿರುವ ಜಗ್ಗೇಶ್, ಸಿನಿಮಾ ನಿರ್ಮಿಸಿ ಅನುಭವಿಸಿದ ನಷ್ಟದ ಬಗ್ಗೆ ಹೇಳಿದ್ದಾರೆ.

“ಕನ್ನಡಿಗರಿಗೆ ವಿಭಿನ್ನ ಚಿತ್ರ ನೀಡಬೇಕು ಹಾಗೂ ಹೊರ ರಾಜ್ಯಗಳಿಗೂ ನನ್ನ ಪ್ರತಿಭೆಯನ್ನು ನಿರೂಪಿಸಬೇಕು ಎಂಬ ಬಯಕೆಯಿಂದ ನನ್ನ ಸ್ವಂತ ಬಂಡವಾಳ ಹಾಕಿ ಬಹಳ ನಂಬಿಕೆಯಿಂದ ‘ಮೇಕಪ್’ ಸಿನಿಮಾ ಮಾಡಿದ್ದೆ. ಆದರೆ ದೌರ್ಭಾಗ್ಯದಿಂದ 2002ರಲ್ಲಿಯೇ 75 ಲಕ್ಷ ರೂ. ಕಳೆದುಕೊಂಡಿದ್ದೆ. ಆ ಸಾಲ ತೀರಿಸಲು ಅಂದು ಮಾರಿದ ಮನೆ ಇಂದು 35 ಕೋಟಿ ರೂ ಆಸ್ತಿ. ಅದನ್ನು ಕೊಂಡಿದ್ದ ನನ್ನ ಮಿತ್ರನಿಗೆ ಇಂದು 16 ಲಕ್ಷ ರೂ ಬಾಡಿಗೆ ಬರುತ್ತಿದೆ. ಕಥೆವ್ಯಥೆ” ಎಂದು ಜಗ್ಗೇಶ್ ನೋವು ಹಂಚಿಕೊಂಡಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿ, “ಅದು ನನ್ನ ಬ್ಯಾಡ್ ಲಕ್ ಅಲ್ಲ. ಹೊಸ ಜೀವನದ ಕಲಿಯಲು ದೇವರು ಕಲಿಸಿದ ಬಹುದೊಡ್ಡ ಪಾಠ. ನಾನು ಕಳೆದುಕೊಂಡಿದ್ದನ್ನೆಲ್ಲಾ ಅದೇ ವರ್ಷ ಸಂಪಾದಿಸಿದೆ. ‘ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ’, ‘ಕಾಸಿದ್ದವನೇ ಬಾಸ್’ ಸಿನಿಮಾಗಳು ಮರಳಿ ಆ ಹಣವನ್ನು ತಂದು ಕೊಟ್ಟವು. ಎಲ್ಲ ಸಿನಿಮಾದ ವರ್ಗದವರಿಗೂ ಶ್ರಮಿಕರಿಗೂ ಪಾಠ ಹೇಳುವಷ್ಟು ನಾನು ಸಮರ್ಥನಾಗಿದ್ದೇನೆ. ಜೀವನದಲ್ಲಿ ಅನುಭವ ಪಾಠ ಕಲಿಸುತ್ತದೆ. ಆಗದು ಎಂದು ಕೈಕಟ್ಟಿ ಕೂರುವ ಜಾಯಮಾನ ನನ್ನದಲ್ಲ” ಎಂದು ಹೇಳಿದ್ದಾರೆ.

‘ಮೇಕಪ್’ ಸಿನಿಮಾ ಸೋತಿರಲಿಲ್ಲ. ಆ ಕಾಲಕ್ಕೆ ಸಿನಿಮಾ ಯಶಸ್ವಿ ಕಂಡಿತ್ತು. ಅಲ್ಲದೇ ಸಿನಿಮಾ ಆ ಕಾಲದಲ್ಲೇ 70 ಲಕ್ಷ ರೂ. ಗಳಿಕೆ ಕಂಡಿತ್ತು. ಆದರೆ ನಾನು ಸಿನಿಮಾಗಾಗಿ 1.52 ಕೋಟಿ ರೂಪಾಯಿ ಹಣವನ್ನು ಬಂಡವಾಳ ಹೂಡಿದ್ದೆ. ಆ ಕಾಲಘಟ್ಟಕ್ಕೆ ಅದು ನಂಬಲಾಗದ ಬಜೆಟ್. ನಾನು ಅಂದು ಹೂಡಿದ್ದ ಬಂಡವಾಳ ನೋಡಿ ಚಿತ್ರರಂಗ ಆಶ್ಚರ್ಯಪಟ್ಟುಕೊಂಡಿತ್ತು. ಇಂದಿನ ಬಿಲ್ಡಪ್ ಬಜೆಟ್‍ಗಳನ್ನು ಅಂದೇ ಮಿಲಾಯಿಸಿ ಬದುಕಿದ ಜನ್ಮ ನನ್ನದು” ಎಂದು ಬರೆದುಕೊಂಡಿದ್ದಾರೆ.

ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳಾ ಜಗ್ಗೇಶ್ 2002ರಲ್ಲಿ ‘ಮೇಕಪ್’ ಎಂಬ ಸಿನಿಮಾ ನಿರ್ಮಿಸಿದ್ದರು. ಈ ಸಿನಿಮಾವನ್ನು ಸಿಂಗೀತಂ ಶ್ರೀನಿವಾಸ್ ನಿರ್ದೇಶಿಸಿದ್ದರು. ಚಿತ್ರದಲ್ಲಿ ಜಗ್ಗೇಶ್ ‘ದೊಡ್ಡಮ್ಮ’ನ ಪಾತ್ರಕ್ಕೆ ಸ್ತ್ರೀ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು. ಲೈಲಾ ಪಟೇಲ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

Comments

Leave a Reply

Your email address will not be published. Required fields are marked *